ಬಳ್ಳಾರಿ: ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆ ಸೇರಿದಂತೆ ಇನ್ನಿತರೆಡೆ ಜಲಪ್ರವಾಹ ಹಿನ್ನೆಲೆ ನೆರೆ ಸಂತ್ರಸ್ತರ ನೆರವು ಕೋರಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕವು ನಿಧಿ ಸಂಗ್ರಹ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ.
ನಗರದ ಎಸ್ಪಿ ವೃತ್ತದ ಬಳಿಯಿರುವ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಸಂಸದ ವೈ. ದೇವೇಂದ್ರಪ್ಪ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಅವರು ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ರು.
ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಆರ್ ವೈಎಂಇಸಿ ಕಾಲೇಜು
ಹಾಗೆಯೇ ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಲೀಡ್ ವಿಭಾಗವು ಮುಂದಾಗಿದ್ದು, ಅಂದಾಜು 2.5 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳನ್ನು ಖರೀದಿಸಿದೆ.
ಅಂದಾಜು 400ಕ್ಕೂ ಅಧಿಕ ಕಿಟ್ ಅನ್ನು ತಯಾರಿಸಿದ್ದು, ನೆರೆ ಹಾವಳಿ ಪ್ರಮಾಣ ತಗ್ಗಿದ ಕೂಡಲೇ ಬೆಳಗಾವಿ ಜಿಲ್ಲೆಯ ನಾನಾ ಗ್ರಾಮಗಳಿಗೆ ತೆರಳಿ, ಈ ಕಿಟ್ ಅನ್ನು ವಿತರಿಸಲು ನಿರ್ಧರಿಸಿದೆ. ಅಲ್ಲದೇ, ಈ ಕಾಲೇಜಿನ ಲೀಡ್ ತಂಡದ ವಿದ್ಯಾರ್ಥಿಗಳಿಂದ ಬಳ್ಳಾರಿ ನಗರದಾದ್ಯಂತ ವಿವಿಧೆಡೆ ಸಂಚರಿಸಿ, ದೇಣಿಗೆ ಸಂಗ್ರಹಿಸುವ ಕಾರ್ಯವೂ ಕೂಡ ಭರದಿಂದ ಸಾಗಿದೆ.
ಹೊಸಪೇಟೆ ಪ್ರೌಢದೇವರಾಯ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ನಿಧಿ ಸಂಗ್ರಹ!
ಜಿಲ್ಲೆಯ ಹೊಸಪೇಟೆ ನಗರ ಹೊರವಲಯದ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ತಂಡವು ನಿಧಿ ಸಂಗ್ರಹಕ್ಕೆ ಮುಂದಾಯಿತು. ಕಾಲೇಜಿನ ಹತ್ತಾರು ಮಂದಿ ವಿದ್ಯಾರ್ಥಿಗಳ ತಂಡವು ಹೊಸಪೇಟೆ ವಿಜಯನಗರ ಕಾಲೇಜಿನ ಆವರಣ, ತಾಲೂಕು ಕ್ರೀಡಾಂಗಣದಲ್ಲಿನ ಆಸನ ಗಳಲ್ಲಿ ಕುಳಿತಿರುವ ಸಾರ್ವಜನಿಕರು ಹಾಗೂ ತಳ್ಳುವಬಂಡಿ ವ್ಯಾಪಾರಸ್ಥರು, ತಂಪು ಪಾನೀಯ ಅಂಗಡಿಗಳ ಮುಂದೆ ನಿಂತಿರುವ ಯುವಜನರತ್ತ ತೆರಳಿ, ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿ ಎಂಬ ಮನವಿ ಮೂಲಕ ನಿಧಿ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡರು.