ವಿಜಯನಗರ: ವಿಶ್ವವಿಖ್ಯಾತ ಹಂಪಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅಗ್ನಿ ಅವಘಡ ಸಂಭವಿಸಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ 100 ಮೀಟರ್ ದೂರದ ಹೊಟೇಲ್ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಸಮೀಪದ ಅಂಗಡಿಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಹಂಪಿಯ ಜನತಾ ಪ್ಲಾಟ್ನಲ್ಲಿ ಮೊದಲು ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಪಕ್ಕದ ಅಂಗಡಿಗಳು, ಹೋಟೆಲ್ ಮತ್ತು ಅನ್ನಪೂರ್ಣೇಶ್ವರಿ ಛತ್ರಕ್ಕೆ ಬೆಂಕಿ ಆವರಿಸಿದೆ. ಈ ಸಂದರ್ಭದಲ್ಲಿ ಹೋಟೆಲ್ನಲ್ಲಿದ್ದ ಸಿಲಿಂಡರ್ಗಳು ಸ್ಫೋಟಗೊಂಡಿವೆ. ಹೀಗಾಗಿ ಇಡೀ ಮ್ಯಾಂಗೋ ಟ್ರೀ ಹೋಟೆಲ್ ಸುಟ್ಟು ಕರಕಲಾಗಿದೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಆಗಿಲ್ಲ. ಘಟನೆ ಕುರಿತಂತೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.