ಬಳ್ಳಾರಿ: ಪಾನಮತ್ತನಾಗಿ ತಂದೆಯೋರ್ವ ತನ್ನ ಮಗಳ ಕೈ-ಕಾಲುಗಳನ್ನು ಕಟ್ಟಿ ಹೆಚ್ಎಲ್ಸಿ ಕಾಲುವೆಯಲ್ಲಿ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೊನ್ನೆ ತಾನೆ ಗೋಡೆಹಾಳು ಗ್ರಾಮದಲ್ಲಿ ವಿವಾಹಿತೆಯ ಕತ್ತಿಗೆ ದುಪ್ಪಟ್ಟಿನಿಂದ ಬಿಗಿದು ಕೊಲೆಗೈದ ಘಟನೆ ಮಾಸುವ ಮುನ್ನವೇ ಇದೀಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಾರದಲ್ಲಿ ಎರಡನೆಯ ಘಟನೆ ಇದಾಗಿದೆ. ಬಳ್ಳಾರಿ ನಗರ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದ ರಾಮುಲು ದೇಗುಲದ ಬಳಿಯ ನಿವಾಸಿ ಆಟೋ ಸೂರಿ ಎಂಬಾತನೇ ಕೊಲೆ ಮಾಡಿದ ಆರೋಪಿ. ಪಲ್ಲವಿ (20) ಕೊಲೆಯಾದ ಯುವತಿ.

ಮಗಳನ್ನು ಪುಸಲಾಯಿಸಿ ಕಾಲುವೆ ಬಳಿ ಕರೆತಂದ ತಂದೆ, ಆಕೆಯ ಕೈ ಕಾಲುಗಳನ್ನು ಕಟ್ಟಿ ಹಾಡಹಗಲಲ್ಲೇ ಕೆನಾಲ್ಗೆ ನೂಕಿದ್ದಾನೆ ಎನ್ನಲಾಗಿದೆ. ಆ ವೇಳೆ ಯುವಕನೋರ್ವ ರಕ್ಷಣೆ ಮಾಡಲು ಮುಂದಾದಾಗ ಆತನ ಜೊತೆಗೂ ಕೆಟ್ಟದಾಗಿ ನಡೆದುಕೊಂಡು ಮಗಳನ್ನು ಕ್ರೂರವಾಗಿ ಕೊಂದಿದ್ದಾನೆ ಎಂದು ತಿಳಿದು ಬಂದಿದೆ.

ಪಲ್ಲವಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಗೃಹ ಕಚೇರಿಯಲ್ಲಿ ಟೈಪಿಸ್ಟ್ ಅಗಿ ಕೆಲಸ ಮಾಡುತ್ತಿದ್ದಳು. ಸ್ಥಳಕ್ಕೆ ಎಸ್ಪಿ ಸಿ.ಕೆ. ಬಾಬಾ, ಎಎಸ್ಪಿ ಡಿ.ಲಾವಣ್ಯ, ಡಿವೈಎಸ್ಪಿ ರಾಮರಾಮ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.