ಹೊಸಪೇಟೆ (ವಿಜಯನಗರ): ರೈತರ ಬೆಳೆಗಳಿಗೆ ಪ್ರಾಣಿಗಳ ಕಾಟ ತಪ್ಪಿದ್ದಲ್ಲ. ಇದನ್ನು ತಪ್ಪಿಸಲು ರೈತ ಹರಸಾಹಸ ಪಡುವಂತಹ ಸ್ಥಿತಿ ಇದೆ. ಇದನ್ನರಿತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ್ಳಿಯ ರೈತ ನಾಗರಾಜ ಗೌಡ ವಿನೂತನ ತಂತ್ರಜ್ಞಾನವನ್ನು ಕಂಡುಕೊಂಡಿದ್ದಾರೆ.
ಇವರು ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸ್ವಯಂ ಸದ್ದು ಮಾಡುವ ಸೌರಯಂತ್ರ ಕಂಡುಹಿಡಿದಿದ್ದಾರೆ. ಈ ಯಂತ್ರವು ಪ್ರತಿ 10 ನಿಮಿಷಗಳಿಗೊಮ್ಮೆ 1 ನಿಮಿಷಗಳ ಕಾಲ ಪ್ರಾಣಿಗಳ ಸದ್ದು ಮಾಡಲಿದೆ. ಇದರ ಜತೆಯಲ್ಲಿ ಎಲ್ಇಡಿ ಲೈಟ್ ಅಳವಡಿಸಲಾಗಿದೆ. ಈ ಲೈಟ್ ತಾನಾಗಿಯೇ ಹೊತ್ತಿಕೊಳ್ಳುತ್ತದೆ. ಇದರಿಂದ ಪ್ರಾಣಿ ಮತ್ತು ಪಕ್ಷಿಗಳು ಹೆದರಿ ಹೊಲಗಳತ್ತ ಸುಳಿಯುವುದಿಲ್ಲ.
ರಾತ್ರಿ ಮತ್ತು ಹಗಲು ವೇಳೆಯಲ್ಲಿಯೂ ಈ ಯಂತ್ರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಂದು ಯಂತ್ರವು 8 ರಿಂದ 10 ಎಕರೆ ವಿಸ್ತೀರ್ಣ ವ್ಯಾಪ್ತಿವರೆಗೆ ಕಾರ್ಯನಿರ್ವಹಿಸಲಿದೆ.
ಬೆಳೆ ರಕ್ಷಿಸಲು ರಾತ್ರಿ ವೇಳೆ ರೈತರು ನಿದ್ದೆಗೆಟ್ಟು ಬೆಳೆಗೆ ಕಾವಲು ಇರಬೇಕಿತ್ತು. ಆದರೆ ಇದೀಗ ಈ ಯಂತ್ರ ಸಹಾಯಕವಾಗಲಿದೆ. ಹೊಲದಲ್ಲಿ ಈ ಯಂತ್ರ ಇಟ್ಟ ಬಳಿಕ ಪ್ರಾಣಿಗಳ ಹಾವಳಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸೌರ ಯಂತ್ರಕ್ಕೆ ಉತ್ತಮ ಬೇಡಿಕೆ ಬಂದಿದೆ. ರಾಜ್ಯದ ರೈತರು ಮಾತ್ರವಲ್ಲ, ಹೊರರಾಜ್ಯದ ರೈತೂ ಸಹ ಈ ಯಂತ್ರದ ಮೊರೆ ಹೋಗುತ್ತಿದ್ದಾರೆ.
ಈ ಕಾರಣಕ್ಕಾಗಿ 200ಕ್ಕೂ ಹೆಚ್ಚು ಯಂತ್ರಗಳ ತಯಾರಿಸಿ ಮಾರಾಟ ಸಹ ಮಾಡಿದ್ದಾರೆ. ಒಂದು ಯಂತ್ರಕ್ಕೆ 9 ಸಾವಿರ ರೂ ತಗುಲಲಿದ್ದು, ರೈತ ನಾಗರಾಜ್ ಅವರನ್ನು ನೇರವಾಗಿ ಸಂಪರ್ಕಿಸಿ ಯಂತ್ರ ಪಡೆಯಬಹುದು.
ಇದನ್ನೂ ಓದಿ: ಕರ್ನಾಟಕ-ಆಂಧ್ರ ಗಡಿಯಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ತರಬೇತಿ ಕಾರ್ಯಾಗಾರ