ಬಳ್ಳಾರಿ: ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ವೆಂಕಟೇಶ್ವರ ಕ್ಯಾಂಪ್ ರೈತನಿಗೆ ಕೋವಿಡ್-19 ದೃಢಪಟ್ಟಿದ್ದು,ಪರಿಣಾಮ ಇದೀಗ ತಾಲ್ಲೂಕು ಆಡಳಿತ ಮತ್ತು ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಕೆಲ ದಿನಗಳ ಕಾಲ ಸಿಂಧನೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಅಲ್ಲಿಂದ ಬಳ್ಳಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದು, ಇದೀಗ ಮೃತಪಟ್ಟಿದ್ದಾನೆ. ರೈತನ ಗಂಟಲು ದ್ರವ ಪರೀಕ್ಷೆಯಿಂದ ಕೋವಿಡ್- 19 ಖಾತ್ರಿಯಾಗಿದ್ದು, ರೈತನ ಅಂತ್ಯಕ್ರಿಯೆ ಬಳ್ಳಾರಿಯಲ್ಲಿ ನೆರವೇರಿಸಲಾಗಿದೆ ಎಂದು ಮೂಲಗಳು ದೃಢಪಡಿಸಿವೆ.
ಕೋವಿಡ್-19 ಸೋಂಕು ದೃಢಪಟ್ಟಿದ್ದ ವ್ಯಕ್ತಿ ಈ ಮುಂಚೆ ಚಿಕಿತ್ಸೆಗೆ ದಾಖಲಾಗಿದ್ದ ಸಿಂಧನೂರು ಖಾಸಗಿ ಆಸ್ಪತ್ರೆ, ವೆಂಕಟೇಶ್ವರ ಕ್ಯಾಂಪ್ನ್ನು ಸೀಲ್ಡೌನ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಆಡಳಿತ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಿಸಿದ್ದು, ಟ್ರಾವೆಲ್ ಹಿಸ್ಟರಿ ಆಧರಿಸಿ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದವರ ಮಾಹಿತಿ ಸಂಗ್ರಹಣೆ ಕಾರ್ಯ ಚುರುಕಿನಿಂದ ನಡೆಸುತ್ತಿದೆ.