ಬಳ್ಳಾರಿ/ವಿಜಯನಗರ: ವಿಪರೀತ ಮಳೆ ಸುರಿದು ಕೃಷಿ ಹೊಂಡದ ಬದು ಒಡೆದ ಪರಿಣಾಮ ಯುವ ರೈತನೋರ್ವ ಬೆಳೆದಿದ್ದ ಪಪ್ಪಾಯಿ ಗಿಡಗಳು ನೆಲಸಮವಾಗಿವೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಪಪ್ಪಾಯಿ ಬೆಳೆ ನಾಶವಾಗಿ ರೈತನೊಬ್ಬ ಕಣ್ಣೀರು ಹಾಕುತ್ತಿದ್ದಾನೆ.
ಸರ್ಕಾರಿ ಹಳ್ಳದಲ್ಲಿ ನಿರ್ಮಿಸಲಾದ ಕೃಷಿ ಹೊಂಡ ಬೆಳೆ ನಾಶಕ್ಕೆ ಬಹುಮುಖ್ಯ ಕಾರಣವೆಂದು ಯುವ ರೈತ ವೀರೇಶ ಹಿರಲಿಂಗಪ್ಪನವರು ಗಳಗಳನೆ ಅಳುತ್ತಲೇ ತಮಗಾದ ನಷ್ಟದ ನೋವು ತೋಡಿಕೊಂಡಿದ್ದಾರೆ. ಅವೈಜ್ಞಾನಿಕ ಕೃಷಿ ಹೊಂಡದಿಂದ ಕಳೆದ ಐದು ವರ್ಷಗಳಿಂದಲೂ ಮಳೆಗಾಲದ ವೇಳೆಯಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆಯಂತೆ. ಈ ಕುರಿತು ಸಂಬಂಧಪಟ್ಟವರ ಗಮನ ಸೆಳೆದ್ರೂ ಕೂಡ ಈವರೆಗೂ ಯಾವುದೇ ಕ್ರಮ ಜರುಗಿಸಲು ಮುಂದಾಗಿಲ್ಲ ಎಂದು ರೈತ ವೀರೇಶ ದೂರಿದ್ದಾರೆ.
ಬಡವರೆಂದು ರಾಜ್ಯ ಸರ್ಕಾರ ಮೂರು ಎಕರೆ ಭೂಮಿ ಮಂಜೂರು ಮಾಡಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಬೇರೆ ಕೆಲಸ ಮಾಡಲು ಸಾಧ್ಯವಾಗದೇ ತಂದೆ ಜೊತೆ ಸೇರಿ ಇದರಲ್ಲಿಯೇ ಕಷ್ಟಪಟ್ಟು ಪಪ್ಪಾಯಿ ಬೆಳೆಯನ್ನ ಬೆಳೆದಿದ್ದೆ. ಆದರೆ ಈ ಹೊಲದ ಪಕ್ಕದಲ್ಲೇ ಸರ್ಕಾರಿ ಹಳ್ಳವಿದೆ. ಆ ಹಳ್ಳದಲ್ಲಿ ನಿಯಮಬಾಹಿರವಾಗಿ ಕೃಷಿ ಹೊಂಡವನ್ನ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಒಡ್ಡು ಒಡೆಯದಂತೆ ದೊಡ್ಡ ಮಣ್ಣಿನ ಒಡ್ಡು ಹಾಕಿದರೂ ಸಹ ಮಳೆ ನೀರಿನ ರಭಸಕ್ಕೆ ಒಡೆದು ಹೋಗಿದೆ. ಹೀಗಾಗಿ ಮೂರು ಎಕರೆಯಲ್ಲಿ ಬೆಳೆದ ಸುಮಾರು 5 ಲಕ್ಷ ರೂ. ಪಪ್ಪಾಯಿ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ವೀರೇಶ್ ಬೇಸರ ವ್ಯಕ್ತಪಡಿಸಿದರು.