ಹೊಸಪೇಟೆ (ಬಳ್ಳಾರಿ): ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರ ಸ್ಮಾರಕ ನಿರ್ಮಾಣ ಕಾರ್ಯವು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಕೇವಲ ಕಾಂಪೌಂಡ್ ನಿರ್ಮಾಣ ಮಾಡಿ ಕೈತೊಳೆದುಕೊಂಡಿದೆ. ಸಂಪೂರ್ಣವಾಗಿ ಸ್ಮಾರಕ ನಿರ್ಮಾಣ ಕಾರ್ಯ ವಿಳಂಬವಾಗಿದೆ.
ಜನಪದ ಸಾಹಿತ್ಯದಲ್ಲಿ ಆಗ್ರ ಸಾಧನೆ ಮಾಡಿದ್ದ ದರೋಜಿ ಈರಮ್ಮ 2014 ಆಗಸ್ಟ್ 12ರಂದು ನಿಧನರಾಗಿದ್ದರು. ಆ ಸಂದರ್ಭದಲ್ಲಿ ದರೋಜಿ ಈರಮ್ಮ ಸಾಧನೆ ತಿಳಿಯಲು ಸ್ಮಾರಕ ಅತ್ಯಗತ್ಯವಾಗಿದೆ. 6 ವರ್ಷ ಕಳೆದರೂ ಸ್ಮಾರಕ ನಿರ್ಮಾಣವಾಗದಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿ. ಶ್ರೀರಾಮುಲು ಸಂಸದರಾದ ಸಂದರ್ಭದಲ್ಲಿ 25 ಲಕ್ಷ ರೂ.ಮಾತ್ರ ಅನುದಾನವನ್ನು ನೀಡಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಮತ್ತಷ್ಟು ಕಾಳಜಿ ವಹಿಸಬೇಕಾಗಿದೆ.
ಕುಂಟುತ್ತಾ ಸಾಗಿದ ಸ್ಮಾರಕ ಕಾರ್ಯಗಳು
2 ಎಕೆರೆಯಲ್ಲಿ ಸ್ಮಾರಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಕಲ್ಲು, ಗಿಡಗಂಟೆಗಳಿಂದ ಕೂಡಿದ್ದು ಜಾಗವನ್ನು ಸಮತಟ್ಟುಗೊಳಿಸಬೇಕಾಗಿದೆ. ದರೋಜಿ ಈರಮ್ಮ ಪುಸ್ತಕಗಳು, ಪ್ರಶಸ್ತಿ ಫಲಕಗಳನ್ನು ಸಂಗ್ರಹಿಸುವ ಸಾಂಸ್ಕೃತಿಕ ಸಮುಚ್ಛಯ ಮತ್ತು ಉದ್ಯಾನವನ್ನು ನಿರ್ಮಿಸಬೇಕಾಗಿದೆ. ಬುರ್ರಕಥಾ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕಾಗಿದೆ.
ಜನಪದ ಸಾಹಿತ್ಯದ ಕಿರೀಟ
ಸುಮಾರು 5,000 ಪುಟಗಳ ಹಾಗೂ ಲಕ್ಷ ಸಾಲುಗಳುಳ್ಳ ಬುಡಕಟ್ಟು ಮಹಾಕಾವ್ಯ ಹಾಡಿದ ಕೀರ್ತಿ ದರೋಜಿ ಈರಮ್ಮ ಅವರಿಗೆ ಸಲ್ಲುತ್ತದೆ. ಬುಡಿಗೆ ಅಥವಾ ಡಿಮ್ಕಿ, ಗಗ್ಗರಿ, ತಂಬೂರಿಯನ್ನು ಹಾಡುವ ಸಂದರ್ಭದಲ್ಲಿ ಅವರು ಬಳಸುತ್ತಿದ್ದರು. ತಂದೆ-ತಾಯಿಯಿಂದ ಬುರ್ರಕಥೆಗಳನ್ನು ಹಾಡಿ ಪ್ರದರ್ಶಿಸುವ ಬುರ್ರವಾದ್ಯವನ್ನು ಕಲಿತಿದ್ದು, ಅವರ ಸಾಧನೆಗೆ ಮೆಟ್ಟಿಲಾಯಿತು.
ಅಕ್ಷರಸ್ಥೆಯಲ್ಲ ದರೋಜಿ ಈರಮ್ಮ:
ದರೋಜಿ ಈರಮ್ಮ ಅವರಿಗೆ ಸಹಿ ಮಾಡಲು ಮಾತ್ರ ಬರುತಿತ್ತು. ಅವರು ಯಾವುದೇ ಶಿಕ್ಷಣ ಸಂಸ್ಥೆಗೆ ತೆರಳಿ ವಿದ್ಯ ಕಲಿತವರಲ್ಲ. ತಂದೆ-ತಾಯಿಯಿಂದ ಶ್ರದ್ಧೆಯಿಂದ ಕಲಿತು ಅಕ್ಷರಸ್ಥರಗಿಂತ ಕಡಿಮೆ ಏನು ಇಲ್ಲ ಎಂದು ಸಾಧಿಸಿ ತೋರಿಸಿಕೊಟ್ಟರು. ದರೋಜಿ ಈರಮ್ಮ ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ.
ಕನ್ನಡದ ಮೇಲೆ ಒಲವು
ದರೋಜಿ ಈರಮ್ಮ ಮೂಲತಃ ಬುಡ್ಗ ತೆಲುಗು ಭಾಷಿಕರು. ಆದರೆ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಲ್ಲದೇ ತೆಲುಗು ಭಾಷೆಯಿಂದ ಮಹಾಕಾವ್ಯಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಜೀವ ತುಂಬಿದ್ದರು. ಅರ್ಥ ಮತ್ತು ಭಾವಾರ್ಥಗಳನ್ನು ಅರಿತುಕೊಂಡು ತರ್ಜುಮೆ ಮಾಡುವ ಮೂಲಕ ಕನ್ನಡ ಜನಪದ ಲೋಕಕ್ಕೆ ಕೊಡುಗೆ ನೀಡಿದರು.
ಪ್ರಶಸ್ತಿ ಗರಿಮೆ
ದರೋಜಿ ಈರಮ್ಮ ಅವರ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. 1999ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2003ರ ಸಂದೇಶ ಕಲಾ ಪ್ರಶಸ್ತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, 2004ರಲ್ಲಿ ಬುರ್ರಕಥಾ ಕಲಾಶ್ರೀ ಪ್ರಶಸ್ತಿ ಹಾಗೂ ನಾಡೋಜ ಪದವಿ, 2007ರಲ್ಲಿ ವಿಜಯ ವಿಠ್ಠಲ ಪ್ರಶಸ್ತಿ, 2008ರಲ್ಲಿ ಡಾ.ರಾಜಕುಮಾರ ಪ್ರಶಸ್ತಿ, 2010ರಲ್ಲಿ ಜಾನಪದ ಶ್ರೀ ಪ್ರಶಸ್ತಿ ಸೇರಿ ಇನ್ನು ಹಲವಾರು ಪ್ರಶಸ್ತಿಗಳು ದರೋಜಿ ಈರಮ್ಮ ಅವರಿಗೆ ಬಂದಿವೆ.
ಮಹಾಕಾವ್ಯಗಳಿಗೆ ಪುಸ್ತಕ ರೂಪ
ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ ಡಾ.ಕೆ.ಎಂ. ಮೇತ್ರಿ ಸಂಪಾದನೆಯಲ್ಲಿ 1997ರಲ್ಲಿ ಕನ್ನಡ ವಿವಿಯು ಪ್ರಕಟಗೊಳಿಸುತ್ತದೆ. ಸ್ಯಾಸಿ ಚಿನ್ನಮ್ಮ ಕಾವ್ಯ 1999ರಲ್ಲಿ ಡಾ.ಸ.ಚಿ.ರಮೇಶ ಸಂಪಾದನೆಯಲ್ಲಿ ಕನ್ನಡ ವಿವಿಯು ಮುದ್ರಿಸುತ್ತದೆ. 2001ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗರಿಗೆದರಿದ ನವಿಲು ಪ್ರಕಟಿಸುತ್ತದೆ. ಇನ್ನು ಎಲ್ಲಮ್ಮನ ಕಾವ್ಯ ಡಾ.ಕೆ.ಎಂ.ಮೇತ್ರಿ ಸಂಪಾದನೆಯಲ್ಲಿ ವಿದ್ಯಾನಿಧಿ ಪ್ರಕಾಶನ ಮೂಲಕ 2005ರಲ್ಲಿ ಮುದ್ರಣಗೊಳ್ಳುತ್ತದೆ. ಇನ್ನೂ ಹಲವಾರು ಮಹಾಕಾವ್ಯಗಳನ್ನು ಪುಸ್ತಕದಲ್ಲಿ ದಾಖಲಿಸಲಾಗುತ್ತದೆ.
ಬುರ್ರಕಥಾ ಈರಮ್ಮ ಅವರ ಕುರಿತು ಪಿಹೆಚ್ಡಿ ಅಧ್ಯಯನಗಳನ್ನು ಸಹ ಮಾಡಲಾಗಿದೆ. ಅಲ್ಲದೇ ಸಾಕ್ಷ್ಯಚಿತ್ರವನ್ನು ರಚಿಸಲಾಗಿದೆ. ಟಿವಿ ಜಾಹೀರಾತಿನಲ್ಲಿ ಕಾಣಸಿಕೊಂಡಿದ್ದಾರೆ. 2009ರಲ್ಲಿ ಸಿ.ಆರ್. ಸಿಂಹ ನಿರ್ದೇಶನದ ರಷ ಋಷಿ ಕುವೆಂಪು ಚಲನಚಿತ್ರದಲ್ಲಿ ಅಭಿನಯಿಸಿದ್ದರು.
ವೈಯಕ್ತಿಕ ಜೀವನ
1932ರಲ್ಲಿ ಅಶ್ವಲಾಲಪ್ಪ ಹಾಗೂ ನಾಗಮ್ಮ ದಂಪತಿಗೆ ದರೋಜಿ ಈರಮ್ಮ ಅವರು ಸಂಡೂರು ತಾಲೂಕಿನ ಹಳೇ ಗ್ರಾಮದಲ್ಲಿ ಜನಿಸುತ್ತಾರೆ. ರಾಮಚಂದ್ರಪ್ಪ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಸತತ 70 ವರ್ಷಗಳ ಕಾಲ ಕಲಾ ಸೇವೆಯನ್ನು ಮಾಡುತ್ತಾರೆ. ತಮ್ಮ 82ನೇ ವಯಸ್ಸಿನಲ್ಲಿ ದೈವಾದೀನರಾದರು.
ಈಟಿವಿ ಭಾರತಕ್ಕೆ ಶಾಸಕರ ಪ್ರತಿಕ್ರಿಯೆ: ಈಟಿವಿ ಭಾರತ ದೊಂದಿಗೆ ದೂರವಾಣಿ ಸಂಪರ್ಕ ಮೂಲಕ ಸಂಡೂರು ಶಾಸಕ ಈ. ತುಕಾರಾಂ ಅವರು ಮಾತನಾಡಿ, 50 ಲಕ್ಷ ರೂ.ವೆಚ್ಚದಲ್ಲಿ ಸ್ವಂತ ಅನುದಾನದ ಮೂಲಕ ಸ್ಮಾರಕಕ್ಕೆ ಹೋಗಲು ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೇ ದರೋಜಿ ಈರಮ್ಮ ಅವರ ಮೂರ್ತಿ ನಿರ್ಮಾಣಕ್ಕಾಗಿ ಅನುದಾನ ಮೀಸಲಿಡಲಾಗಿದೆ. ಕೊರೊನಾದಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲಾಗುವುದು. ಸ್ಮಾರಕವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದಿದ್ದಾರೆ.