ಹೊಸಪೇಟೆ: ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಡೆದಿದೆ.
ಕಳೆದ ಐದು ವರ್ಷಗಳ ಹಿಂದೆ ಮೃತ ನಂಜುಂಡೇಶ್ವರ ಎಂಬ ವ್ಯಕ್ತಿ, ಪಾರ್ವತಿ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಇಂದು ಇವರು ವಿವಾಹ ವಾರ್ಷಿಕೋತ್ಸವ ಆಚರಿಸಬೇಕಿತ್ತು. ಆದರೆ ಇಬ್ಬರು ಮಕ್ಕಳಿಗೆ ವಿಷವುಣಿಸಿ ದಂಪತಿ ನೇಣು ಹಾಕಿಕೊಂಡಿದ್ದಾರೆ. ಘಟನೆ ಇಡೀ ಗಾದಿಗನೂರ ಗ್ರಾಮಸ್ಥರಲ್ಲಿ ತಲ್ಲಣ ಮೂಡಿಸಿದೆ.
ಓದಿ: ಸಿಎಂ ತೀರ್ಮಾನಕ್ಕೆ ನಾನು ಬದ್ಧ: ಸಚಿವ ಬಿ.ಸಿ.ಪಾಟೀಲ್
ನಂಜುಡೇಶ್ವರ ಬೆಳಗ್ಗೆ 7:30 ಗಂಟೆಯಾದರೂ ಮನೆಯಿಂದ ಹೊರಗಡೆ ಬಂದಿಲ್ಲ. ಬಳಿಕ ಮನೆ ಬಾಗಿಲು ತೆರೆದು ನೋಡಿದಾಗ ನಾಲ್ಕು ಜನ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮನೆ ಒಳಗಡೆ ಬೀಗ ಹಾಕಿಕೊಂಡು, ಹೊರಗಡೆ ಕೀ ಎಸೆದಿದ್ದಾರೆ.
ಡೆತ್ ನೋಟ್ ಬರೆದಿದ್ದು ಅದನ್ನು ಮನೆಯೊಳಗಿನ ಗೋಡೆಗೆ ಅಂಟಿಸಿದ್ದಾರೆ. ಸಹೋದರನ ವಾಟ್ಸಾಪ್ಗೂ ಕಳುಹಿಸಿದ್ದಾರೆ. ಆದರೆ, ಆತ ಮೊಬೈಲ್ನಲ್ಲಿ ಡಾಟಾ ಆನ್ ಮಾಡಿಕೊಂಡಿಲ್ಲ. ಒಂದು ವೇಳೆ ಸಹೋದರನಿಗೆ ಡೆತ್ ನೋಟ್ ಬಂದಿದ್ದರೆ ಮಗನ ಕುಟುಂಬವನ್ನು ಉಳಿಸಬಹುದಿತ್ತು ಎಂದು ತಂದೆ ಗವಿಯಪ್ಪ ಕಣ್ಣೀರು ಹಾಕಿದರು.
ಈ ಹಿಂದೆ ನಂಜುಂಡೇಶ್ವರ ಷೇರು ಮಾರುಕಟ್ಟೆಯಲ್ಲಿ 10 ಲಕ್ಷ ರೂ. ಕಳೆದುಕೊಂಡಿದ್ದರಂತೆ. ಅದನ್ನು ತಂದೆ ಗವಿಯಪ್ಪ ಪಾವತಿಸಿ, ಮಗನಿಗೆ ಸಹಾಯ ಮಾಡಿದ್ದಾರೆ. ಇದಾದ ಬಳಿಕ ಮಗನ ಜೀವನ ಚೆನ್ನಾಗಿತ್ತು. ಈಗ ಇಡೀ ಕುಟುಂಬ ಸಾವಿಗೆ ಶರಣಾಗಿರುವುದು ಕುಟುಂಬಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಂಜುಂಡೇಶ್ವರ ಡಿಪ್ಲೋಮಾ ವಿದ್ಯಾಭ್ಯಾಸ ಮುಗಿಸಿದ ಬಳಿಕ ಜಿಂದಾಲ್ ಕಂಪನಿಯಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದರು. ಕಳೆದ 10 ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತಿಂಗಳಿಗೆ 35 ರಿಂದ 40 ಸಾವಿರ ವೇತನವನ್ನೂ ಪಡೆಯುತ್ತಿದ್ದರು. ಇವರಿಗೆ ವಾಸ ಮಾಡಲು ಗಾದಿಗನೂರನಲ್ಲಿ ಸ್ವಂತ ಮನೆಯೂ ಇತ್ತು.
ಈ ಹಿಂದೆ ನಂಜುಂಡೇಶ್ವರ ಗೆಳೆಯರಿಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಬುದ್ಧಿವಾದ ಹೇಳಿದ್ದರಂತೆ. ಅಲ್ಲದೇ, ಸದಾ ಧನಾತ್ಮಕ ಆಲೋಚನೆಯಿಂದ ನಗುಮುಖದಿಂದ ಕುಟುಂಬ ಸಾಗಿಸುತ್ತಿದ್ದರಂತೆ.