ಬಳ್ಳಾರಿ: ಜಿಲ್ಲೆಯ ಕೆಲವೆಡೆ ಲಾರ್ವಾ ಸೊಳ್ಳೆಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಫಾಗಿಂಗ್ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್ ಎಲ್ ಜನಾರ್ದನ ಈಟಿವಿ ಭಾರತ್ಗೆ ತಿಳಿಸಿದರು.
ಇಂದು ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ರೋಗಗಳು ಹರಡುವ ಮೊದಲೇ ಫಾಗಿಂಗ್ ಮಾಡುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಆದರೆ, ಅದರಿಂದಲೇ ಸಾಂಕ್ರಾಮಿಕ ಕಾಯಿಲೆಗಳನ್ನು ತಡಯಲು ಸಾಧ್ಯವಿಲ್ಲ. ಈಗಾಗಲೇ ಲಾರ್ವಾ ಸೊಳ್ಳೆಗಳ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸಿ ಫಾಗ್ಗಿಂಗ್ ಮಾಡಲಾಗಿದೆ. ಸಾಂಕ್ರಾಮಿಕ ಕಾಯಿಲೆಗಳನ್ನು ನಿಯಂತ್ರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದರು.
57 ಫಾಗಿಂಗ್ ಯಂತ್ರಗಳಲ್ಲಿ ಕೆಲವೊಂದು ಕೆಟ್ಟಿವೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅಂದಾಜು 57 ಫಾಗಿಂಗ್ ಯಂತ್ರಗಳಿವೆ. ಆ ಪೈಕಿ ಕೆಲವೊಂದು ಕೆಟ್ಟಿವೆಯಾದ್ರೂ ಅವುಗಳನ್ನು ರಿಪೇರಿ ಮಾಡಿಸಲು ಜಿಲ್ಲಾ ಮಲೇರಿಯಾ ಅಧಿಕಾರಿಗೆ ಆದೇಶ ಹೊರಡಿಸಲಾಗಿದೆ. ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಫಾಗಿಂಗ್ ಯಂತ್ರಗಳನ್ನು ಇಡಲಾಗಿದೆ. ಹೆಚ್ಚಾಗಿ ಒಂದು ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗೋ ಗ್ರಾಮ, ನಗರ ಹಾಗೂ ಪಟ್ಟಣಗಳಲ್ಲಿ ಫಾಗಿಂಗ್ ಮಾಡಲಾಗುವುದು ಎಂದರು.
ಜಿಲ್ಲೆಯಾದ್ಯಂತ ಈವರೆಗೂ ಸರಿಸುಮಾರು 3444 ಶಂಕಿತ ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಆ ಪೈಕಿ 135 ಡೆಂಘೀ ಪ್ರಕರಣಗಳು ಖಚಿತಗೊಂಡಿವೆ. 41 ಚಿಕನ್ ಗುನ್ಯಾ ಪ್ರಕರಣಗಳ ಪೈಕಿ 13 ಖಚಿತಗೊಂಡಿವೆ. 16 ಮಲೇರಿಯಾ ಪ್ರಕರಣಗಳು ಖಚಿತಗೊಂಡಿವೆ ಎಂದು ಜನಾರ್ದನ ತಿಳಿಸಿದರು.