ಬಳ್ಳಾರಿ : ಬಿ ಎಸ್ ಯಡಿಯೂರಪ್ಪ ಇಂದು ರಾಜೀನಾಮೆ ನೀಡಿದ್ದಾರೆ. ಅಲಿಬಾಬಾ ನಲವತ್ತು ಕಳ್ಳರಿಂದ ರಾಜ್ಯದ ಜನತೆಗೆ ಮುಕ್ತಿ ಸಿಕ್ಕಿದಂತಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.
ಸದ್ಯ ಇರುವ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಭ್ರಷ್ಟಾಚಾರದಿಂದ ಕೂಡಿವೆ. ರಾಜ್ಯದಲ್ಲಿ ಸಿಡಿ ಪ್ರಕರಣ, ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆಯಿಂದ ಭ್ರಷ್ಟಾಚಾರ, ರಫೆಲ್ ಹಗರಣ, ಪೆಗಾಸಸ್, ಇವುಗಳಿಂದ ಬಿಜೆಪಿ ಭ್ರಷ್ಟ ಸರ್ಕಾರ ಎಂಬುದು ತಿಳಿಯುತ್ತಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಫೆಲ್ ಹಗರಣದಲ್ಲಿ ಭಾಗಿಯಾದ ಮೋದಿ ಸರ್ಕಾರ 35 ಸಾವಿರ ಕೋಟಿ ರೂ.ನಷ್ಟು ಕೊಳ್ಳೆ ಹೊಡೆದಿದೆ. ಇದು ಭಾರತ ಇತಿಹಾಸದಲ್ಲಿ ಬಹುದೊಡ್ಡ ಹಗರಣ ಎಂದು ಆರೋಪಿಸಿದ್ರು. ಪೆಗಾಸಸ್ ಕೇಂದ್ರ ಸರ್ಕಾರ ಮಾಡಿಸಿದ್ದು, ದೇಶದ ಸಾವಿರಾರು ಗಣ್ಯರ, ಪತ್ರಕರ್ತರ ಫೋನ್ ಟ್ಯಾಪ್ ಮಾಡಲಾಗಿದೆ. ಅದರಲ್ಲಿ ಸಮ್ಮಿಶ್ರ ಸರ್ಕಾರದ ಬಹುತೇಕ ಮುಖಂಡರ, ಸಿಬ್ಬಂದಿಯ ಫೋನ್ ಟ್ಯಾಪ್ ಮಾಡಿಸಲಾಗಿದ್ದು, ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು, ರಾಜ್ಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಕ್ಕಳಿಗೆ, ಗರ್ಭಿಣಿಯರಿಗೆ ಮೊಟ್ಟೆ ವಿತರಿಸುವ ಯೋಜನೆ ಅಡಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದಾರೆ. ಕೂಡಲೇ ಸಚಿವೆ ಜೊಲ್ಲೆ, ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಎಡಿಸಿಗೆ ಕ್ಲಾಸ್ ತೆಗೆದುಕೊಂಡ ಮಾಜಿ ಸಂಸದ ಉಗ್ರಪ್ಪ :
ಮನವಿ ಪತ್ರ ಸ್ವೀಕರಿಸಲು ವಿಳಂಬ ನೀತಿಯನ್ನ ಅನುಸರಿಸಿದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಬಳ್ಳಾರಿಯ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕ್ಲಾಸ್ ತೆಗೆದುಕೊಂಡ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ.
ಮೊಟ್ಟೆ ವಿತರಣೆಯ ಗೋಲ್ಮಾಲ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ಭ್ರಷ್ಟಾಚಾರ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಪ್ರತಿಭಟನೆ ಹಮ್ಮಿಕೊಂಡಿತ್ತು. ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಿಂದ ಡಿಸಿ ಕಚೇರಿವರೆಗೆ ಆಗಮಿಸಿದ ಪ್ರತಿಭಟನಾ ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕೆಂದರೆ ಡಿಸಿ ಬರಲಿಲ್ಲ.
ಕೊನೆಗೆ ಅಪರ ಜಿಲ್ಲಾಧಿಕಾರಿಗಾಗಿ ಕಾಯಬೇಕಾಯ್ತು. ಅವರೂ ಸಹ ವಿಳಂಬವಾಗಿ ಬಂದಿದ್ದರಿಂದ ಮನವಿ ಕೊಡುವಾಗ ವಿ.ಎಸ್.ಉಗ್ರಪ್ಪ, ನಿಮಗೆ ರೆಸ್ಪಾನ್ಸಿಬಿಲಿಟಿ ಇಲ್ವಾ..? ಮಹಿಳೆಯರ ಮತ್ತು ಮಕ್ಕಳ ಸಂಕಷ್ಟದ ಅಂಗವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೇ, ನೀವು ಮನವಿ ಸ್ವೀಕರಿಸಲಿಲ್ಲವೆಂದರೇ ಹೇಗೆ..? ಎಂದು ಸ್ಥಳದಲ್ಲೇ ಕಿಡಿಕಾರಿದರು.