ಬಳ್ಳಾರಿ : ಕಾಂಗ್ರೆಸ್‌ನಿಂದ ಬಳ್ಳಾರಿ ನಗರ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಮಂಗಳವಾರ ತಡರಾತ್ರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ ಅವರು, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಜೆಡಿಎಸ್ ಸೇರಿದರು.
ಜೆಡಿಎಸ್‌ಗೆ ಸೇರ್ಪಡೆಯಾದ ಅನಿಲ್ ಲಾಡ್ ಅವರೇ ಬಳ್ಳಾರಿ ನಗರ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಅನಿಲ್ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಕಳೆದ ವಾರ ಘೋಷಿಸಲಾಗಿದ್ದ ಬಳ್ಳಾರಿ ಜೆಡಿಎಸ್ ಅಭ್ಯರ್ಥಿಯನ್ನ ಪಕ್ಷವು ಏಕಾಏಕಿ ಬದಲಾಯಿಸಿದೆ. ಕಳೆದ ವಾರ ಪ್ರಕಟವಾಗಿದ್ದ ಜೆಡಿಎಸ್ ಪಟ್ಟಿಯಲ್ಲಿ ಮುನ್ನಾಭಾಯಿ ಎನ್ನುವವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು.
ಇದನ್ನೂ ಓದಿ : ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಸೊರಬ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಿದಾನಂದಗೌಡ
ಕಳೆದ ಮೂರು ದಿನಗಳ ಹಿಂದೆ ಬಳ್ಳಾರಿ ಪತ್ರಕರ್ತರ ಒಕ್ಕೂಟದ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ್ದ ಅನಿಲ್ ಲಾಡ್, "ಕಡಿಮೆ ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಸೋತ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಸ್ಪಷ್ಟ ಕಾರಣ ಹೇಳಿಲ್ಲ. ಅದಕ್ಕಾಗಿ ಬೆಂಬಲಿಗರ ಆಶಯದಂತೆ ಬಂಡಾಯವಾಗಿ ಸ್ಪರ್ಧೆ ಮಾಡಲು ಬಯಸಿರುವೆ. ನಾನು ದೆಹಲಿಗೆ ಹೋಗಿ ಕ್ಷೇತ್ರದಲ್ಲಿನ ವಾಸ್ತವಾಂಶಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ. ಕೂಡ್ಲಿಗಿಯ ಬಿಜೆಪಿ ಶಾಸಕರಾಗಿದ್ದ ಎನ್ ವೈ ಗೋಪಾಲಕೃಷ್ಣ ಅವರಿಗೆ, ವಿಜಯನಗರದ ಮಾಜಿ ಶಾಸಕ ಗವಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಬಳ್ಳಾರಿಯ ಕಾರ್ಪೊರೇಷನ್ ಕಾಂಗ್ರೆಸ್ ತೆಕ್ಕೆಗೆ ಬರಲು ನಾನು ಕಾರಣ. ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿದೆ " ಎಂದು ಬೇಸರ ಹೊರಹಾಕಿದ್ದರು.
ಇದನ್ನೂ ಓದಿ : ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಅನಿಲ್ ಲಾಡ್
ಬಿ ವಿ ನಾಯಕ ಬಿಜೆಪಿ ಸೇರ್ಪಡೆ: ಇನ್ನು ಟಿಕೆಟ್ ಸಿಗದೆ ನಿರಾಶರಾದ ಮುಖಂಡರು ಪಕ್ಷಾಂತರ ನಡೆಸುತ್ತಿದ್ದಾರೆ. ನಿನ್ನೆ ಮಾಜಿ ಸಂಸದ ಹಾಗೂ ರಾಯಚೂರು ಜಿಲ್ಲೆಯ ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ ವಿ ನಾಯಕ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಮಾನವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಯಕ ನಿನ್ನೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ಗೆ ಸಲ್ಲಿಸಿದರು. ಜೊತೆಗೆ, ಪಕ್ಷ ತೊರೆಯುತ್ತಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ಕೂಡ ತಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಬಿಜೆಪಿ ಸೇರ್ಪಡೆ: ಮಾನವಿಯಿಂದ ಟಿಕೆಟ್ ಸಾಧ್ಯತೆ