ಬಳ್ಳಾರಿ: ತಾಲೂಕಿನ ನಾನಾ ಗ್ರಾಮಗಳ ರೈತರು ಬೆಳೆದ ಕರಿಬೇವು ಬೆಳೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 2 ದಿನಗಳ ಹಿಂದೆ 3 ರೂಪಾಯಿಯಂತೆ ಕೆಜಿ ಕರಿಬೇವನ್ನು ಖರೀದಿಸಲಾಗುತ್ತಿತ್ತು. ಇದೀಗ 9 ರೂಪಾಯಿಯಂತೆ ಕೆಜಿ ಕರಿಬೇವನ್ನ ಖರೀದಿಸಲು ದಲ್ಲಾಳಿಗಳು ಮುಂದಾಗಿರುವುದು ಕರಿಬೇವು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಆ.25 ರಂದು 'ಪಾತಾಳಕ್ಕೆ ಕುಸಿದ ಕರಿಬೇವು ಬೆಲೆ... ಪರಿಹಾರದ ನಿರೀಕ್ಷೆಯಲ್ಲಿ ರೈತರು' ಎಂಬ ಶೀರ್ಷಿಕೆಯಡಿ 'ಈಟಿವಿ ಭಾರತ'ದಲ್ಲಿ ವಿಸ್ತೃತವಾದ ವರದಿಯನ್ನ ಬಿತ್ತರಿಸಲಾಗಿತ್ತು. ಅದರ ದ್ಯೋತಕವಾಗಿಯೇ ನಿನ್ನೆ ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು, ಬೆಳಗಲ್ಲು ತಾಂಡಾ, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡಾ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಬೆಳೆದ ಕರಿಬೇವು ಬೆಳೆಗಾರರನ್ನ ಸಂಪರ್ಕಿಸಿದ ದಲ್ಲಾಳಿಗಳು ನೇರವಾಗಿ ಅವರ ಹೊಲಗಳಿಗೆ ತೆರಳಿ ಕರಿಬೇವು ಖರೀದಿಸಲು ಮುಂದಾಗಿದ್ದಾರೆ.
ಪಾತಾಳಕ್ಕೆ ಕುಸಿದ ಕರಿಬೇವು ಬೆಲೆ... ಪರಿಹಾರದ ನಿರೀಕ್ಷೆಯಲ್ಲಿ ರೈತರು
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಬಿ.ಬೆಳಗಲ್ಲು ಗ್ರಾಮದ ರೈತ ಬಸವಣ್ಣೆಯ್ಯ ಅವರು, ನಿಮ್ಮ ವರದಿ ತುಂಬ ಅನುಕೂಲವಾಗಿದೆ. ಯಾಕೆಂದ್ರೆ, ಈ ಹಿಂದೆ 3 ರೂಪಾಯಿ ಕೆಜಿಯಂತೆ ಕೊಟ್ಟರೂ ಖರೀದಿಸಲು ಯಾರೊಬ್ಬರೂ ಮುಂದಾಗುತ್ತಿರಲಿಲ್ಲ. ಈಗ 9ರೂ.ಗಳ ಕೆ.ಜಿಯಂತೆ ಈ ಕರಿಬೇವನ್ನ ಖರೀದಿಸಲು ದಲ್ಲಾಳಿಗಳು ಮುಂದಾಗಿರೋದು ನಮಗೆ ಖುಷಿ ತಂದಿದೆ. ಇದರಿಂದ ಬೆಳೆದ ಕರಿಬೇವು ಬೆಳೆಗೆ ತಕ್ಕಮಟ್ಟಿಗಾದ್ರೂ ಬೆಂಬಲ ಬೆಲೆ ದೊರತಂತಾಗಿದೆ ಎಂದರು.