ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಈ ಬಾರಿ ನೂರಕ್ಕೆ ನೂರರಷ್ಟು ನಾವೇ ಅಧಿಕಾರ ಹಿಡಿಯೋದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಮತ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ರಾಯಲ್ ಪೋರ್ಟ್ನ ಹೋಟೆಲ್ನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ನ 21 ಸದಸ್ಯರು ಗೆದ್ದಿದ್ದಾರೆ. ಅವರೆಲ್ಲರೂ ಕೂಡ ನಮ್ಮೊಂದಿಗೆ ಇದ್ದಾರೆ. ಬಿಜೆಪಿಗರು ನಮ್ಮ ಸದಸ್ಯರನ್ನು ತಮ್ಮತ್ತ ಸೆಳೆಯಲು ಆಗುವುದಿಲ್ಲ. ಆಪರೇಷನ್ ಕಮಲದ ಆಟ ನಡೆಯುವುದಿಲ್ಲ. ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಒಳಗಾದವರು ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆಂದು ಈಗಾಗಲೇ ಜನರು ನೋಡುತ್ತಿದ್ದಾರೆ ಎಂದರು.
ಸಿಎಂ ಅಭ್ಯರ್ಥಿ ಘೋಷಣೆ ಚರ್ಚೆ ಅಪ್ರಸ್ತುತ: ಸಿಎಂ ಅಭ್ಯರ್ಥಿ ಯಾರೆಂಬ ಚರ್ಚೆ ಈಗ ಅಪ್ರಸ್ತುತ. ನಮ್ಮ ಪಕ್ಷದ ಶಾಸಕರಿಗೆ ಈಗಾಗಲೇ ಖಡಕ್ ಸೂಚನೆ ನೀಡಿರುವೆ. ಯಾರು ಕೂಡ ಬಹಿರಂಗವಾಗಿ ಸಿಎಂ ಅಭ್ಯರ್ಥಿ ಇಂಥವರು ಅಂತಾ ಘೋಷಣೆ ಮಾಡಬಾರದು. ಕಾಂಗ್ರೆಸ್ ಪಕ್ಷಕ್ಕೆ 150 ವರ್ಷದ ಇತಿಹಾಸವಿದೆ. ಅಂತಹ ಸಂಸ್ಕೃತಿ ನಮ್ಮದಲ್ಲ ಎಂದು ಖಡಕ್ ಎಚ್ಚರಿಕೆ ನೀಡಿರುವೆ. ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ಮುಖಂಡರು ಒಗ್ಗೂಡಿಕೊಂಡು ಮುಂಬರುವ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಖಂಡ್ರೆ ತಿಳಿಸಿದರು.