ಬಳ್ಳಾರಿ: ಗಣಿನಾಡಿನ ಭವಿಷ್ಯ ನಿಧಿ ಕಚೇರಿ(ಇಪಿಎಫ್ಒ)ಗೆ ಈವರೆಗೆ ಲೆಕ್ಕವಿಲ್ಲದಷ್ಟು ನೌಕರರು ಎಡತಾಕಿದ್ದಾರೆ. ಅವರೆಲ್ಲ ಭವಿಷ್ಯ ನಿಧಿ ಕಚೇರಿಗೆ ಬಂದು ಹೋಗುತ್ತಿರುವುದು ಕೊರೊನಾ ತಂದಿಟ್ಟಿರುವ ಆರ್ಥಿಕ ಸಂಕಷ್ಟದಿಂದ.
ಹೌದು, ಈ ಆರ್ಥಿಕ ಸಂಕಷ್ಟವನ್ನ ಸಮರ್ಥವಾಗಿ ಎದುರಿಸಲು ಬಹುಸಂಖ್ಯಾತ ಖಾಸಗಿ ಕಂಪನಿಗಳ ನೌಕರರಿಗೆ ಈ ಭವಿಷ್ಯ ನಿಧಿಯೇ ಆಸರೆಯಾಗಿದೆ. ಲಾಕ್ಡೌನ್ ಹಾಗೂ ಅನ್ಲಾಕ್ ಜಾರಿ ಬಳಿಕ ಇಲ್ಲಿನ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ ಸಾವಿರಾರು ನೌಕರರು ತಮ್ಮ ಭವಿಷ್ಯ ನಿಧಿಗೆ ಕೈಹಾಕಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಒತ್ತಡದ ನಿವಾರಣೆಗೆ ಬಹುಸಂಖ್ಯಾತ ನೌಕರರು ಈ ನಿಧಿಗೆ ಕೈಹಾಕಿದ್ದು ಬಹಳ ನೋವಿನ ಸಂಗತಿ.
ಭವಿಷ್ಯ ನಿಧಿ ಅನ್ನೋದು ತಮ್ಮ ಕುಟುಂಬದ ಮಕ್ಕಳ ಶೈಕ್ಷಣಿಕ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಲೇ ವಿಶೇಷ ಭದ್ರತೆ ಕಲ್ಪಿಸುವ ನಿಧಿ. ಆದ್ರೆ, ಮಹಾಮಾರಿ ಕೊರೊನಾದಿಂದ ಭವಿಷ್ಯ ನಿಧಿಯತ್ತ ಮುಖಮಾಡುವ ನೌಕರರ ಸಂಖ್ಯೆ ಹೆಚ್ಚಾಗಿದೆ. ದಿನಾಲೂ ಅಂದಾಜು 200 ರಿಂದ 250 ಮಂದಿ ನೌಕರರು ಆನ್ಲೈನ್ ಹಾಗೂ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈವರೆಗೂ ಸಾವಿರಾರು ಮಂದಿ ನೌಕರರು ಅರ್ಜಿ ಹಾಕಿದ್ದು, ಕೋಟ್ಯಂತರ ರೂ. ಹಣದ ಸೌಲಭ್ಯ ಪಡೆದುಕೊಂಡಿದ್ದಾರೆ. ಬಳ್ಳಾರಿ- ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ನೌಕರರು ಭವಿಷ್ಯ ನಿಧಿ ಹಣವನ್ನ ಪಡೆಯಲು ಮುಂದಾಗಿದ್ದಾರೆ. ಇತ್ತೀಚೆಗೆ ಹೊಸ ಕಂಪನಿಗಳು ಸ್ಥಾಪನೆಯಾಗಿವೆ. ಆ ಕಂಪನಿಗಳ ಸಾವಿರಾರು ಮಂದಿ ನೌಕರರು ಕೂಡ ಈ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ.
ಫಾರಂ 68 ಜೆ ಅಡಿ ಅಂದಾಜು 4,822 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಫಾರಂ 68 ಎಲ್ ಅಡಿಯಲ್ಲಿ 7,232 ಮಂದಿ ಅರ್ಜಿ ಹಾಕಿದ್ದಾರೆ. ಅಂದಾಜು 17,79,46,109 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಳ್ಳಾರಿ- ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ಅಂದಾಜು 135 ಹೊಸ ಕಂಪನಿಗಳು ಜಿಲ್ಲೆಯ ಇಪಿಎಫ್ಒ ವ್ಯಾಪ್ತಿಗೆ ಬರುತ್ತವೆ.
ಅಂದಾಜು 2,525 ಮಂದಿ ನೌಕರರ ಭವಿಷ್ಯ ನಿಧಿಯನ್ನ ಮೊತ್ತವನ್ನ ಆಯಾ ಕಂಪನಿಗಳು ಪಾವತಿಸುತ್ತಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1900 ಕಂಪನಿಗಳಿಗೆ ಭವಿಷ್ಯನಿಧಿಯ ಸೌಲಭ್ಯ ನೀಡಲಾಗಿದೆ. ಆ ಪೈಕಿ 39,526 ಮಂದಿ ಈ ಭವಿಷ್ಯ ನಿಧಿಯ ಹಣವನ್ನು ಪಡೆದುಕೊಂಡಿದ್ದಾರೆ ಎನ್ನುತ್ತಾರೆ ಇಪಿಎಫ್ಒ ಬಳ್ಳಾರಿ ಪ್ರಾದೇಶಿಕ ಕಚೇರಿಯ ಟೆಕ್ನಿಕಲ್ ಇನ್ಚಾರ್ಜ್ ಪಿ.ಜಾನ್ ಫೀಟರ್.