ಬಳ್ಳಾರಿ: ಭಾರತ ಸರ್ಕಾರದ ರೈಲ್ವೆ ಇಲಾಖೆಯಿಂದ ಗಣಿನಾಡು ಬಳ್ಳಾರಿಗೆ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲು ಸಕಲ ತಯಾರಿ ನಡೆದಿದೆ.
ತಾಲೂಕಿನ ಹದ್ದಿನಗುಂಡು ಮಾರ್ಗದಿಂದ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನವರೆಗೆ, ಜಿಂದಾಲ್ - ಬನ್ನಿಹಟ್ಟಿ ಮತ್ತು ರಂಜಿತಪುರ ಮಾರ್ಗವಾಗಿ ಈಗಾಗಲೇ ವಿದ್ಯುತ್ ಸಂಪರ್ಕವುಳ್ಳ ಟ್ರ್ಯಾಕ್ ಅಳವಡಿಸುವ ಕಾರ್ಯ ಅತ್ಯಂತ ವೇಗವಾಗಿ ಸಾಗಿದೆ. ಮುಂಬರುವ ಮೇ 15ರೊಳಗಾಗಿ ವಿದ್ಯುತ್ ಚಾಲಿತ ರೈಲನ್ನು ಆರಂಭಿಸುವ ಇರಾದೆ ಕೂಡ ಇದೆ. ಹದ್ದಿನಗುಂಡು ನಿಲ್ದಾಣದಿಂದ ತೋರಣಗಲ್ಲಿನವರೆಗೂ ಸುಮಾರು 36 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಟ್ರ್ಯಾಕ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಿವೆ. ಅವುಗಳು ಪೂರ್ಣಗೊಂಡ ಬಳಿಕವೇ ವಿದ್ಯುತ್ ಚಾಲಿತ ರೈಲು ಓಡಿಸುವ ಕಾರ್ಯ ಪ್ರಾರಂಭವಾಗುವ ಸಾಧ್ಯತೆಯಿದೆ.
ಟ್ರೈಯಲ್ ರನ್:
ವಿದ್ಯುತ್ ಚಾಲಿತ ರೈಲ್ವೇ ಟ್ರ್ಯಾಕ್ ಮೇಲೆ ಮೇ. 15ರೊಳಗೆ ಟ್ರೈಯಲ್ ರನ್ ಟೆಸ್ಟ್ ಮಾಡಲಾಗುವುದು. ಆ ಬಳಿಕ ಬಳ್ಳಾರಿ - ತೋರಣಗಲ್ಲು ಮಾರ್ಗವಾಗಿ ವಿದ್ಯುತ್ ಚಾಲಿತ ರೈಲನ್ನು ಓಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2018ರ ಜನವರಿ ತಿಂಗಳಲ್ಲಿ ಈ ವಿದ್ಯುತ್ ಚಾಲಿತ ರೈಲ್ವೆ ಟ್ರ್ಯಾಕ್ ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, 2019ರ ಮೇ ತಿಂಗಳಲ್ಲಿ ಮೊದಲನೇ ಹಂತದಲ್ಲಿ ವಿದ್ಯುತ್ ಚಾಲಿತ ರೈಲನ್ನು ಓಡಿಸಲು ರೈಲ್ವೆ ಇಲಾಖೆಯು ಸನ್ನದ್ಧವಾಗಿದೆ.
ಎರಡನೇ ಹಂತದಲ್ಲಿ ತೋರಣಗಲ್ಲು - ಹೊಸಪೇಟೆ ಮಾರ್ಗದ ವಿದ್ಯುತ್ ಚಾಲಿತ ರೈಲನ್ನು ಓಡಿಸುವ ಸಲುವಾಗಿ ಈಗಾಗಲೇ ವಿದ್ಯುತ್ ಟ್ರ್ಯಾಕ್ ಅಳವಡಿಸಲಾಗುತ್ತಿದೆ. ಇದಲ್ಲದೇ, ಚಿಕ್ಕಜಾಜೂರು - ಬೆಂಗಳೂರು ಮಾರ್ಗದಲ್ಲೂ ವಿದ್ಯುತ್ ಚಾಲಿತ ಟ್ರ್ಯಾಕ್ ಅಳವಡಿಸಲಾಗುತ್ತಿದೆ. ಅದು ಕೂಡ ಶೀಘ್ರವೇ ಪೂರ್ಣಗೊಳ್ಳಲಿದ್ದು, ಈ ಮಾರ್ಗವಾಗಿಯೂ ಕೂಡ ವಿದ್ಯುತ್ ಚಾಲಿತ ರೈಲು ಗಾಡಿ ಓಡುವ ಸಾಧ್ಯತೆ ಇದೆ ಎನ್ನುತ್ತಿವೆ ರೈಲ್ವೆ ಇಲಾಖೆ ಮೂಲಗಳು.
ವಿದ್ಯುತ್ ಚಾಲಿತ ರೈಲಿನಿಂದ ಉಳಿತಾಯ ಜಾಸ್ತಿ, ವೇಗವೂ ಜಾಸ್ತಿ:
ಈ ವಿದ್ಯುತ್ ಚಾಲಿತ ರೈಲು ಸಂಚರಿಸುವುದರಿಂದ ಆದಾಯದಲ್ಲಿ ಬಹುಪಾಲು ಉಳಿತಾಯ ಆಗಲಿದೆ. ಈಗಾಗಲೇ ಡೀಸೆಲ್ ರೈಲುಗಳು ಸಂಚರಿಸುತ್ತಿವೆ. ಅದರಿಂದ ಆದಾಯದ ಬಹುಪಾಲು ಹಣವನ್ನ ಡಿಸೇಲ್ ಖರೀದಿಗೆ ವ್ಯಯಿಸಬೇಕಾಗುತ್ತದೆ. ಹಾಗಾಗಿ, ಡೀಸೆಲ್ ರೈಲ್ಗಿಂತಲೂ ವಿದ್ಯುತ್ ಚಾಲಿತ ರೈಲ್ ಸೂಕ್ತ. ವಿದ್ಯುತ್ ದರವೂ ಕಡಿಮೆಯಿದೆ. ಅಗತ್ಯಕ್ಕನುಗುಣವಾಗಿ ವಿದ್ಯುತ್ ಲಭ್ಯವಿದೆ. ಹೀಗಾಗಿ, ವಿದ್ಯುತ್ ಚಾಲಿತ ರೈಲು ಸಂಚರಿಸುವುದರಿಂದ ಆದಾಯದ ಮಿತಿ ದುಪ್ಪಟ್ಟಾಗಲಿದೆ.
ವೇಗದ ಮಿತಿಯೂ ಕೂಡ ಜಾಸ್ತಿಯಿರುತ್ತದೆ. ವಾಯು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಈ ಡೀಸೆಲ್ ರೈಲುಗಳಿಂದ ವಾಯು ಹಾಗೂ ಪರಿಸರ ಮಾಲಿನ್ಯ ಜಾಸ್ತಿಯಾಗುತ್ತದೆ. ರೈಲ್ವೆ ಇಲಾಖೆಗೆ ವಾರ್ಷಿಕವಾಗಿ ಬರುವ ಆದಾಯದಲ್ಲಿ ಶೇ. 40ರಷ್ಟು ಉಳಿತಾಯ ಆಗುವ ಸಾಧ್ಯತೆಯಿದೆ.