ಬಳ್ಳಾರಿ: ಗಣಿನಗರಿ ಬಳ್ಳಾರಿಯಲ್ಲಿ ವಿದ್ಯುತ್ ಚಾಲಿತ ರೈಲು ಕಾರ್ಯಾರಂಭ ಮಾಡಿದ್ದು, ಈ ಭಾಗದ ಬಹುದಿನಗಳ ಕನಸು ಇದೀಗ ಈಡೇರಿದಂತಾಗಿದೆ.
ಪರಿಸರ ಸ್ನೇಹಿಯಾಗಿರುವ ಈ ವಿದ್ಯುತ್ ಚಾಲಿತ ರೈಲು ಇದೀಗ ಹುಬ್ಬಳ್ಳಿಯಿಂದ ವಿಜಯವಾಡಕ್ಕೆ ಸಂಚರಿಸುವಾಗ ಹುಬ್ಬಳ್ಳಿಯಿಂದ ಬಳ್ಳಾರಿವರೆಗೆ ಡೀಸೆಲ್ ಎಂಜಿನ್ ಮೂಲಕ ಸಂಚರಿಸಿ, ಬಳಿಕ ಬಳ್ಳಾರಿಯಿಂದ ವಿಜಯವಾಡಕ್ಕೆ ವಿದ್ಯುತ್ ಟ್ರ್ಯಾಕ್ ಎಂಜಿನ್ ಮೂಲಕ ಸಂಚರಿಸಲಿದೆ. ಹಾಗೆ ಹುಬ್ಬಳ್ಳಿಯಿಂದ ತಿರುಪತಿಗೆ ಸಂಚರಿಸುವ ರೈಲು ಬಳ್ಳಾರಿಗೆ ಆಗಮಿಸಿ ಇಲ್ಲಿಂದ ತಿರುಪತಿಗೆ ವಿದ್ಯುತ್ ಚಾಲಿತ ರೈಲಿನ ಎಂಜಿನ್ ಮುಖೇನ ಸಂಚಾರ ಬೆಳೆಸಲಿದೆ. ಆದ್ದರಿಂದ ಮೊದಲ ಹಂತದ ವಿದ್ಯುತ್ ಚಾಲಿತ ರೈಲಿನ ಸಂಚಾರಕ್ಕೆ ಗಣಿನಾಡಿನಲ್ಲಿ ಅಭೂತಪೂರ್ವವಾಗಿ ಚಾಲನೆ ದೊರೆತಿದೆ.
ಎರಡನೇ ಹಂತದಲ್ಲಿ ಬಳ್ಳಾರಿ ತಾಲೂಕಿನ ಹದ್ದಿನಗುಂಡು ರೈಲು ನಿಲ್ದಾಣದಿಂದ ಅಂದಾಜು 36 ಕಿಲೋಮೀಟರ್ ವಿದ್ಯುತ್ ತಂತಿ ಅಳವಡಿಸುವ ಕಾರ್ಯವು ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಅದು ಕೂಡ ಚಾಲನೆ ದೊರೆಯಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ರೈಲ್ವೆ ಸಲಹಾ ಸಮಿತಿ ಮುಖಂಡ ಭರತ್ ಜೈನ್, ಸದಸ್ಯರಾದ ದೀಪೇಶ್, ವಿಶ್ವನಾಥ್, ಶ್ರೀನಿವಾಸ ಹಾಗೂ ಅರವಿಂದ ಅವರು ಈ ವಿದ್ಯುತ್ ಚಾಲಿತ ರೈಲಿಗೆ ಸ್ವಾಗತ ಕೋರಿದ್ದಾರೆ.