ಬಳ್ಳಾರಿ: ತಾಲೂಕಿನ ಹೊಸ ಮೋಕಾ ಗ್ರಾಮದ ಬಳಿ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಸಮೀಪದಲ್ಲೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಐವರು ಗಾಯಗೊಂಡಿದ್ದಾರೆ.
ಯಾತ್ರಿಯೊಬ್ಬರ ಕೈಯಲ್ಲಿ ಹಿಡಿದಿದ್ದ ಐರನ್ ರಾಡ್ ಹೊಂದಿದ್ದ ಕಾಂಗ್ರೆಸ್ ಧ್ವಜ ವಿದ್ಯುತ್ ಲೈನ್ಗೆ ತಗುಲಿದ ಹಿನ್ನೆಲೆ ಅವಘದ ಸಂಭವಿಸಿದೆ. ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ದೊಡ್ಡಪ್ಪ, ಸಂತೋಷ್ ಸೇರಿದಂತೆ ಐದು ಜನರಿಗೆ ವಿದ್ಯುತ್ ಶಾಕ್ ತಗುಲಿ ಗಾಯಗೊಂಡಿದ್ದಾರೆ. ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಶಾಸಕ ನಾಗೇಂದ್ರ ಅವರು ಮೋಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಆಗಬಹುದಾಗಿದ್ದ ದುರಂತವನ್ನು ತಪ್ಪಿಸಲಾಗಿದೆ.
ಗಾಯಗೊಂಡವರಿಗೆ 1 ಲಕ್ಷ ಪರಿಹಾರ ಘೋಷಿಸಿದ ರಾಹುಲ್: ಮೋಕಾ ಸರ್ಕಾರಿ ಆಸ್ಪತ್ರೆಗೆ ರಾಹುಲ್ ಗಾಂಧಿ ಭೇಟಿ ನೀಡಿ ಗಾಯಾಳು ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಬಳಿಕ ಅವಘಡದಲ್ಲಿ ಗಾಯಗೊಂಡವರಿಗೆ ತಲಾ ಒಂದು ಲಕ್ಷ ಪರಿಹಾರ ಘೋಷಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, 1000 ಕಿ.ಮೀ ಪೂರೈಸಿದೆ. ಸದ್ಯ ಬಳ್ಳಾರಿ ಜಿಲ್ಲೆಯಿಂದ ಆಂಧ್ರಪ್ರದೇಶದತ್ತ ಪಾದಯಾತ್ರೆ ಸಾಗುತ್ತಿದೆ. ನಿನ್ನೆಯಷ್ಟೇ ಬಳ್ಳಾರಿಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಹರಿದುಬಂದಿದ್ದರು.
(ಓದಿ: 1000 ಕಿಮೀ ಪೂರೈಸಿದ ಭಾರತ್ ಜೋಡೋ: ರಾಗಾ ಜೊತೆಗಿದೆ 60 ಜನರ ಟೀಂ, ಸ್ಟಾರ್ಸ್ ಬರದಿದ್ರೂ ಭಾರೀ ಜನ ಬೆಂಬಲ!)