ಬಳ್ಳಾರಿ: ಗಣಿ ಜಿಲ್ಲೆಯ ನಾನಾ ಕಡೆಗಳಲ್ಲಿ ಏಕಕಾಲಕ್ಕೆ ನಡೆಯ ಬೇಕಿದ್ದ ಎಂಟು ಬಾಲ್ಯ ವಿವಾಹಗಳನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ತಡೆ ಹಿಡಿದಿದ್ದಾರೆ.
ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ಶನಿವಾರ- ಭಾನುವಾರ ಎರಡು ದಿನಗಳಕಾಲ ದಾಳಿ ನಡೆಸಿ ಬಾಲ್ಯ ವಿವಾಹಗಳನ್ನ ತಡೆ ಹಿಡಿಯಲಾಗಿದೆ.
ಬಳ್ಳಾರಿ ತಾಲೂಕಿನ ರೂಪನಗುಡಿಯಲ್ಲಿ 2, ಕಪ್ಪಗಲ್ಲು, ಸಿರವಾರ, ವದ್ದಟ್ಟಿ, ಕೊಳಗಲ್ಲು ಗ್ರಾಮಗಳಲ್ಲಿ ತಲಾ ಒಂದೊಂದು ಹಾಗೂ ಸಿರುಗುಪ್ಪ ತಾಲೂಕಿನ ತೊಂಡೆಹಾಳ್ ಗ್ರಾಮದ ಬಾಲಕ- ಬಾಲಕಿ ಯೊಂದಿಗೆ ನಡೆಯಬೇಕಿದ್ದ ಬಾಲ್ಯ ವಿವಾಹಗಳನ್ನ ತಡೆದ ಅಧಿಕಾರಿಗಳ ತಂಡ, ಅವರ ಪೋಷಕರಿಂದ ಮುಚ್ಚಳಿಕೆ ಪತ್ರಗಳನ್ನ ಬರೆಯಿಸಿಕೊಂಡಿದ್ದಾರೆ.
ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಉಷಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಷಾ, ಸಿಬ್ಬಂದಿ ರಾಜಾನಾಯ್ಕ, ಈಶ್ವರ್ ರಾವ್, ಉಮೇಶ್, ಜ್ಯೋತಿ, ನಾಗುಬಾಯಿ ನೇತೃತ್ವದ ಪೊಲೀಸ್ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಈ ದಾಳಿ ಕಾರ್ಯಚರಣೆಯಲಿ ಪಾಲ್ಗೊಂಡಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್.ನಾಗರಾಜ ತಿಳಿಸಿದ್ದಾರೆ.