ಬಳ್ಳಾರಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಚಾಲನೆ ನೀಡಿದ್ದಾರೆ.

ಸಾರ್ವಜನಿಕರ ಕುಂದುಕೊರತೆಗಳಿಗೆ ತತ್‍ಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಕಂಟ್ರೋಲ್ ರೂಂ ಆರಂಭಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಸಾರ್ವಜನಿಕ ಕುಂದುಕೊರತೆಗಳನ್ನು ವಿದ್ಯುನ್ಮಾನ ವ್ಯವಸ್ಥೆಯ ಮುಖಾಂತರ ಶೀಘ್ರವಾಗಿ ಪರಿಹರಿಸಲಾಗುತ್ತದೆ. ಇದಕ್ಕೆ ಒಂದು ವಾಟ್ಸ್ ಆ್ಯಪ್ ನಂ:8277888866 ಮೊಬೈಲ್ ನಂಬರ್ ಫಿಕ್ಸ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ದೂರು/ಸಮಸ್ಯೆ/ಕುಂದುಕೊರತೆಗಳಿದ್ದಲ್ಲಿ, ಸಂಬಂಧಿಸಿದ ಫೊಟೋ/ವಿಡಿಯೋ/ಸಂದೇಶಗಳನ್ನು(ವಿವರಗಳೊಂದಿಗೆ) ಸಲ್ಲಿಸಬಹುದಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬಹುದಾಗಿದೆ.
ತಮ್ಮ ದೂರು/ಸಮಸ್ಯೆ/ಕುಂದುಕೊರತೆಗಳ ಪರಿಹಾರಕ್ಕಾಗಿ ಆ ಸಂದೇಶಗಳನ್ನು ಸಂಬಂಧಪಟ್ಟ ಇಲಾಖೆಗೆ ಶೀಘ್ರವಾಗಿ ರವಾನಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಅದೇ ರೀತಿ 1077 ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದು ಅಥವಾ 08392-277100 ಸಂಖ್ಯೆಗೆ ಕರೆ ಮಾಡಿ ಸಹ ಅಹವಾಲುಗಳ ಮೂಲಕ ದೂರು ದಾಖಲಿಸಬಹುದು.
ಡಿಸಿ ಕಚೇರಿಯಲ್ಲಿ ಆರಂಭಿಸಲಾಗಿರುವ ಈ ಇ-ಸ್ಪಂದನೆ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ದೂರುದಾರರ ಹೆಸರು, ದೂರಿನ ವಿವರ ಹಾಗೂ ವಿಳಾಸ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡು ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇರುತ್ತದೆಯೋ ಅದಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಸ್‍ಎಂಎಸ್ ಮೂಲಕ ರವಾನಿಸಲಿದ್ದಾರೆ. ಬರಲಿರುವ ಎಸ್‍ಎಂಎಸ್ ಲಿಂಕ್‍ನ್ನು ಒತ್ತುವುದರ ಮೂಲಕ ಅವರು ನೋಡಿಕೊಂಡು ಅದಕ್ಕೆ ಸಂಬಂಧಿಸಿದ ನಿರ್ಧಿಷ್ಠ ಉತ್ತರವನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಲಿದ್ದಾರೆ. ಅವರು ಕಳುಹಿಸಿರುವುದಕ್ಕೆ ಸ್ವೀಕೃತಿ ಮತ್ತು ದೂರುದಾರರಿಗೂ ಕೂಡ ತಮ್ಮ ದೂರಿನ ಪ್ರಗತಿಯನ್ನು ಅವರಿಗೆ ಬರಲಿರುವ ಎಸ್‍ಎಂಎಸ್ ಲಿಂಕ್ ಮೂಲಕವೇ ವೀಕ್ಷಿಸಬಹುದಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಇ-ಸಂದನೆ ಕೋಶಕ್ಕೆ ಮಾತ್ರ ಲಾಗೀನ್ ವ್ಯವಸ್ಥೆ ಇರುತ್ತದೆ. ಅಧಿಕಾರಿಗಳಿಗೆ ಯಾವುದೇ ರೀತಿಯ ಲಾಗಿನ್ ಇರುವುದಿಲ್ಲ. ಎಸ್‍ಎಂಎಸ್‍ನಲ್ಲಿ ಬಂದಿರುವ ವೆಬ್‍ಲಿಂಕ್‍ನ್ನು ಕ್ಲಿಕ್ಕಿಸಿ, ಸದರಿ ಕುಂದುಕೊರತೆಯ ಬಗ್ಗೆ ತಮ್ಮ ಕ್ರಮವನ್ನು ನಮೂದಿಸಲಿದ್ದಾರೆ. ಸಾಮಾನ್ಯವಾಗಿ ಒಂದು ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ 30 ದಿನಗಳ ಕಾಲಾವಶಕಾಶ ನೀಡಲಾಗಿದ್ದು, ಅಷ್ಟರೊಳಗೆ ನಿರ್ಧಿಷ್ಠ ಉತ್ತರ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿ ಕಳುಹಿಸಲು ಅವಧಿ ನಿಗದಿಪಡಿಸಲಾಗಿದೆ.
ಕುಂದುಕೊರತೆಗಳನ್ನು ವರ್ಗಿಕರಿಸಲು ಆಯಾ ವರ್ಗದ ಕುಂದುಕೊರತೆಗಳಿಗೆ ಅಧಿಕಾರಿಗಳು ಕ್ರಮವಹಿಸಲು ನಿರ್ಧಿಷ್ಠ ದಿನಗಳನ್ನು ನಿಗದಿಪಡಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿವರಿಸಿದ್ದಾರೆ. ಇ-ಸ್ಪಂದನೆ ವೆಬ್‍ಸೈಟ್‍ನ್ನು ಬಳ್ಳಾರಿಯ ಎನ್‍ಐಸಿ ತಂಡದ ಅಧಿಕಾರಿಗಳಾದ ಶಿವಪ್ರಕಾಶ ವಸ್ತ್ರದ ಮತ್ತು ವೆಂಕಟರಮಣ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ.