ಬಳ್ಳಾರಿ: ಹಾವು ಮನೆಯಲ್ಲೇ ಕಾಣಿಸಿಕೊಂಡರೆ ಮಾರುದ್ದ ಹೋಗುತ್ತಾರೆ. ಅಂತಹುದರಲ್ಲಿ ಹಾವಿನ ವಿಷ ತೆಗೆದು ಔಷಧ ತಯಾರಿಕೆಗೆ ಹೇಗೆ ಮುಂದಾಗುತ್ತಾರೆ? ಔಷಧ ತಯಾರಿಕೆ ಒಂದು ಅವೈಜ್ಞಾನಿಕ ಕ್ರಮ. ಅಂತಹ ಕೃತ್ಯಗಳು ಇಲ್ಲಂತೂ ನಡೆಯಲ್ಲ ಎಂದು ಹಾವು ಮತ್ತು ವನ್ಯ ಜೀವಿಗಳ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಮೀರ್ ಶೇಠ್ ಸಾಬ್ರೀ ಹೇಳಿದರು.
ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ಈವರೆಗೂ ಬೆಳಕಿಗೆ ಬಂದಿಲ್ಲ. ಹಾಗೊಂದು ವೇಳೆ ಬೆಳಕಿಗೆ ಬಂದಿದ್ದು ಕಂಡು ಬಂದರೆ ಅದೊಂದು ಅಪರಾಧ. ಹಾವಿನ ವಿಷದಿಂದ ತಯಾರಿಸಿದ ಔಷಧ ಎಂದು ಮಾರಲು ಮುಂದಾದರೆ ಸಾರ್ವಜನಿಕರು ಅದನ್ನು ಖರೀದಿಸಲು ಮುಂದಾಗಬೇಡಿ. ಏಕೆಂದರೆ ಹಾವಿನ ವಿಷ ತೆಗೆದ ಕ್ಷಣಾರ್ಧದಲ್ಲೇ ಅದು ಗಟ್ಟಿಯಾಗಿ ಬಿಡುತ್ತದೆ. ಹೀಗಾಗಿ, ಅದು ಅಸಾಧ್ಯ ಎಂದರು.
ವಿಷದಿಂದ ತಯಾರಿಸಲಾದ ಔಷಧ ಮನುಷ್ಯನ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯಕೀಯ ಲೋಕ ಹೇಳುತ್ತಿದೆ. ಆದರೆ, ಅದರ ತಯಾರಿಕೆಗೆ ಸೂಕ್ತವಾದ ಘಟಕಗಳಿಲ್ಲ. ಅದನ್ನು ಶುರು ಮಾಡಬೇಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಪರವಾನಗಿ ಬೇಕು. ಅದಕ್ಕೆ ಕೋಟ್ಯಂತರ ರೂ. ವ್ಯಯಿಸಬೇಕು. ಇಷ್ಟೆಲ್ಲ ಮಾಡಿದಾಗ ಮಾತ್ರ ಹಾವಿನ ವಿಷದಿಂದ ಔಷಧ ತಯಾರಿಸಬಹುದು. ಮಾರುಕಟ್ಟೆಯಲ್ಲಿ ಅಂಧಶ್ರದ್ಧೆ ಮೂಡಿಸುವ ಔಷಧ ಮತ್ತು ಗಿಡಮೂಲಿಕೆಗಳನ್ನು ಸಾರ್ವಜನಿಕರು ಖರೀದಿಸಿ ಮೋಸ ಹೋಗಬಾರದು ಎಂದು ಹೇಳಿದರು.
300 ಹಾವುಗಳ ರಕ್ಷಣೆ: ಲಾಕ್ಡೌನ್ ಅವಧಿಯಲ್ಲೇ ಸುಮಾರು 300ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿನೊಳಗೆ ಬಿಡಲಾಗಿದೆ. ಈವರೆಗೂ ನಮ್ಮ ಸಂಸ್ಥೆಯಿಂದ 13,000-15,000 ಹಾವುಗಳನ್ನು ರಕ್ಷಿಸಲಾಗಿದೆ ಎಂದರು.
ಮಣ್ಣುಮುಕ್ಕ ಹಾವು ರೈತಸ್ನೇಹಿ: ಮಣ್ಣು ಮುಕ್ಕ ಹಾವು ರೈತರ ಸ್ನೇಹಿಯಾಗಿದೆ. ಆದರೆ, ಅದನ್ನು ಕೋಟ್ಯಂತರ ರೂ.ಗಳಿಗೆ ಬೆಲೆಬಾಳುವ ಹಾವು ಎಂದು ಬಿಂಬಿಸಲಾಗಿದೆ. ಅದು ಶುದ್ಧ ಸುಳ್ಳು. ಅದರ ರಕ್ಷಣೆಗೆ ರೈತರು ಮುಂದಾಗಬೇಕು ಎಂದು ಮನವಿ ಮಾಡಿದರು.