ಬಳ್ಳಾರಿ: ಕರ್ನಾಟಕ, ಆಂಧ್ರಪ್ರದೇಶ ಗಡಿ ಸರ್ವೇ ಕಾರ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ ಕ್ಯಾಮರಾಗಳನ್ನ ಬಳಸಲಾಗುತ್ತಿದೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಹಾಗೂ ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ, ತುಮಟಿ ಗ್ರಾಮಗಳ ಸರಹದ್ದಿನಲ್ಲಿರುವ ಬ್ರಿಟಿಷ್ ಕಾಲದ ಗಡಿ ಗುರುತು ನಾಶ ಹಾಗೂ ಗಡಿ ಒತ್ತುವರಿ ಆರೋಪದ ಹಿನ್ನೆಲೆ ಕಳೆದೊಂದು ತಿಂಗಳಿನಿಂದಲೂ ಈ ಗಡಿಭಾಗದಲ್ಲಿ ಗಡಿ ಸರ್ವೇ ಕಾರ್ಯ ನಡೆದಿದೆ.
ಈಗಾಗಲೇ ಮೂರ್ನಾಲ್ಕು ಬಾರಿ ಈ ಸರ್ವೇ ಕಾರ್ಯ ನಡೆದರೂ ಕೂಡ ಗಡಿ ಭಾಗದಲ್ಲಿನ ಗಡಿ ಗುರುತು-ಗಡಿ ಒತ್ತುವರಿ ವಿವಾದ ಮಾತ್ರ ಈವರೆಗೂ ಇತ್ಯರ್ಥವಾಗಿಲ್ಲ. ಸದ್ಯ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಡ್ರೋನ್ ಬಳಕೆಗೆ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು ಮುಂದಾಗಿದ್ದು, ಈಗಲಾದ್ರೂ ಈ ಗಡಿ ಸರ್ವೇಕಾರ್ಯ ಸುಸೂತ್ರವಾಗಿ ಮುಕ್ತಾಯಗೊಳ್ಳಲಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.