ಬಳ್ಳಾರಿ : ನಗರದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಕುಡಿಯುವ ನೀರಿನ ಜೊತೆ ಒಳಚರಂಡಿ ನೀರು ಮಿಶ್ರಣಗೊಂಡು ನಿವಾಸಿಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ.
ಈ ಕಾಲೊನಿಯಲ್ಲಿ ಅಂದಾಜು 60ಕ್ಕೂ ಹೆಚ್ಚು ಮನೆಗಳಿದ್ದು, ಈ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಕಳೆದ 40 ದಿನಗಳಿಂದ ಶುದ್ದ ನೀರಿನ ಜೊತೆಗೆ ಒಳ ಒಳಚರಂಡಿ ನೀರು ಸೇರಿಕೊಂಡು ನೀರು ಕುಡಿಯಲು ಬಾರದಂತಾಗಿದೆ. ಜೊತೆಗೆ ಮನೆಯ ಸುತ್ತಮುತ್ತ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಜನರು ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗುವ ಭೀತಿ ಎದುರಿಸುತ್ತಿದ್ದಾರೆ.
ಈ ಸಂಬಂಧ ಹಲವಾರು ದಿನಗಳಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈಗಲಾದ್ರೂ ಪಾಲಿಕೆ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಪಾಲಿಕೆ ಮಾಜಿ ಸದಸ್ಯ ಎಸ್. ಮಲ್ಲನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಮಸ್ಯೆ ಬಗೆಹರಿಸುವುದಾಗಿಯೂ ಭರವಸೆ ನೀಡಿದ್ದಾರೆ.