ಬಳ್ಳಾರಿ: ರಕ್ತದಾನ ಮಾಡುವುದರ ಮೂಲಕ ಅಮೂಲ್ಯವಾದ ಪ್ರಾಣ ಉಳಿಸಲು ಮುಂದಾಗಬೇಕು ಎಂದು ವಿಮ್ಸ್ ನಿರ್ದೇಶಕರೂ ಆಗಿರುವ ರೆಡ್ ಕ್ರಾಸ್ ಸಭಾಪತಿ ಡಾ. ದೇವಾನಂದ ಹೇಳಿದರು.
ನಗರದ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಶುಕ್ರವಾರ ರೆಡ್ ಕ್ರಾಸ್ ಸಂಸ್ಥೆಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಬದಲಾವಣೆ ಕಾಣುತ್ತೇವೆ ಹಾಗೂ ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ ಎಂದ ಅವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ತಲೆನೋವು, ಕೆಮ್ಮು, ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಓಂಪ್ರಕಾಶ್ ಕಾಲೆಪಳ್ಳಿ, ವಿಕ್ವರ್ ಅಹಮದ್, ರವಿ, ಬಿ.ಕೆ.ಬಸವಲಿಂಗ, ಹರಿ ಶಂಕರ್ ಅವರನ್ನು ಸನ್ಮಾನಿಸಲಾಯಿತು.