ಹೊಸಪೇಟೆ: ಐತಿಹಾಸಿಕ ಹಂಪಿ ಎಂದರೆ ಕಣ್ಣ ಮುಂದೆ ಬರುವೆದೇ ವಿಜಯನಗರ ಸಾಮ್ರಾಜ್ಯ. ಈಗ ಮತ್ತೆ ವಿಜಯನಗರ ಎಂಬ ಹೆಸರಿನಲ್ಲಿ ಜಿಲ್ಲೆ ಘೋಷಣೆಯಾಗಿದೆ. ಇದು ಐತಿಹಾಸಿಕವಾಗಿ ಮಹತ್ವವನ್ನು ಪಡೆದುಕೊಂಡಿದೆ.
ಹೊಸಪೇಟೆಗಿದೆ ಇತಿಹಾಸ:
ಕೃಷ್ಣದೇವರಾಯ ತನ್ನ ತಾಯಿಯ ನೆನಪಿಗಾಗಿ ನಾಗಲಾಪುರ (ಈಗೀನ ನಾಗೇನಹಳ್ಳಿ) ಹಾಗೂ ಹೆಂಡತಿ ನೆನಪಿಗಾಗಿ ತಿರುಮಲದೇವಿಯರ ಪಟ್ಟಣವನ್ನು (ಈಗೀನ ಹೊಸಪೇಟೆ) ನಿರ್ಮಿಸುತ್ತಾನೆ. ಈಗ ಹೊಸಪೇಟೆಯು ವಿಜಯನಗರ ಜಿಲ್ಲೆಯಾಗಿ ಪರಿವರ್ತನೆಗೊಳ್ಳುತ್ತಿದೆ. ವಿಜಯನಗರ ಜಿಲ್ಲೆಯಾಗಿ ಪರಿವರ್ತನೆಗೊಳ್ಳುತ್ತಿರುವುದು ಅದಕ್ಕೆ ಪ್ರೇರಣೆಯೇ ವಿಜಯನಗರ ಸಾಮ್ರಾಜ್ಯವಾಗಿದೆ. ಅಂದು ವಿಜಯನಗರ ಕಾಲದಲ್ಲಿ ಹಂಪಿ ರಾಜಧಾನಿಯಾಗಿತ್ತು. ಈಗ ವಿಜಯನಗರ ಜಿಲ್ಲೆಯಲ್ಲಿ ಹಂಪಿ ಬರುತ್ತಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎನ್ನಬಹುದು.
ವಿಜಯನಗರ ಕಾಲದ ಆಡಳಿತ ವೈಶಿಷ್ಟ್ಯ:
ವಿಜಯನಗರವು ರಾಜಾಳ್ವಿಕೆಗೆ ಒಳಪಟ್ಟಿತ್ತು. ಕೃಷ್ಣದೇವರಾಯ ತನ್ನ ಅಮುಕ್ತ ಮೌಲ್ಯದಲ್ಲಿ ರಾಜನು ರಾಜತಂತ್ರದಲ್ಲಿ ನಿಪುಣರಾದವರ ಮೂಲಕ ಆಳಬೇಕಿತ್ತು. ಪ್ರಜೆಗಳ ಮೇಲೆ ತೆರಿಗೆ ಸಾಧಾರಣವಾಗಿರಬೇಕು. ಆ ಕಾಲದಲ್ಲಿ ಅನೇಕ ಬಗೆಯ ಸ್ಥಳೀಯ ಸಂಸ್ಥೆಗಳು ಕಾಣ ಬರುತ್ತವೆ. ಗ್ರಾಮಸಭೆಗಳು, ಮಹಾಜನ ಸಭೆಗಳು, ಮಹಾನಾಡು ಮತ್ತು ನಾಡಸಭೆಗಳು ಪೌರಸಭೆಗಳು ಮತ್ತು ಅನೇಕ ಶ್ರೇಣಿಗಳ ವ್ಯವಸ್ಥೆಗಳಿದ್ದವು. ಆ ಕಾಲದಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆಯಿತ್ತು.
ಆರ್ಥಿಕ ಪರಿಸ್ಥಿತಿ:
ಯುದ್ಧಗಳನ್ನು ಕೈಗೊಳ್ಳುವುದಕ್ಕೆ ಧನದ ಅವಶ್ಯಕತೆ ಇತ್ತು. ಆ ಸಂದರ್ಭದಲ್ಲಿ ಅರಸು ಹಾಗೂ ಅಧಿಕಾರಿಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸಿದರು. ಬೀಳು ಬಿದ್ದ ಮತ್ತು ಕಾಡಿನ ಪ್ರದೇಶಗಳನ್ನು ವ್ಯವಸಾಯಕ್ಕೆ ಒಳಪಡಿಸಿದರು. ಅನಂತಪುರ ಮತ್ತು ಕರ್ನೂಲ್ ಜಿಲ್ಲೆಯಲ್ಲಿ ರತ್ನ ಮತ್ತು ವಜ್ರದ ಗಣಿಗಳಿದ್ದವು. ಬಟ್ಟೆ, ಅಕ್ಕಿ , ಕಬ್ಬಿಣದ ಅದುರು, ಮರ, ಸಂಬಾರ ಪದಾರ್ಥಗಳು ಹಾಗೂ ಸಕ್ಕರೆ ರಫ್ತು ವಸ್ತುಗಳಾಗಿದ್ದವು.
ವಿಜಯನಗರ ಹೆಸರಿನಿಂದ ಕರ್ನಾಟಕದ ಸಮ್ರಾಜ್ಯ ಸ್ಥಾಪನೆಯಾಯಿತು. ಇದನ್ನು ಸ್ಥಾಪನೆ ಮಾಡುವ ಮೊದಲನೇ ರಾಜ ಮನೆತನ ಸಂಗಮ ವಂಶವಾಗಿದೆ. ವಿರೂಪಾಕ್ಷೇಶ್ವರ ದೇವರು ವಿಜಯನಗರ ಕಾಲದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿರುತ್ತದೆ ಎಂದು ಸಂಶೋಧಕ ಮೃತ್ಯುಂಜಯ ರುಮಾಲೆ ಅವರು ಈಟಿವಿ ಭಾರತ್ಗೆ ಮಾಹಿತಿ ನೀಡಿದರು.