ಹೊಸಪೇಟೆ: ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು, ಯಾವುದಕ್ಕೂ ಎದೆಗುಂದದೆ ತನ್ನ ಪಾತ್ರ ನಿರ್ವಹಿಸುತ್ತಾಳೆ. ಅದರಂತೆ ತಾಲೂಕಿನ ನಾಗೇನಹಳ್ಳಿಯ ದೇವದಾಸಿ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳಲು ಸನ್ನದ್ಧರಾಗಿದ್ದಾರೆ.
ಈ ದಿಟ್ಟ ಮಹಿಳೆಯರಿಗೆ ಸಖಿ ಟ್ರಸ್ಟ್ ಆಧಾರವಾಗಿ ನಿಂತು ಮಾರ್ಗದರ್ಶನ ನೀಡುತ್ತಿದ್ದು, ಅಜೀಂ ಪ್ರೇಮ್ ಜಿ ಫೌಂಡೇಶನ್ ಧನ ಸಹಾಯ ಮಾಡುತ್ತಿದೆ. 15 ಜನ ದೇವದಾಸಿಯರಿಗೆ 5 ಎಕೆರೆ ಭೂಮಿಯನ್ನು ಮೂರು ವರ್ಷದ ಗುತ್ತಿಗೆ ಪಡೆದುಕೊಂಡು ಕೃಷಿ ಕಾರ್ಯ ಕೈಗೊಂಡಿದ್ದಾರೆ. ವಿಷಕಾರಿ ರಾಸಾಯನಿಕ ಅಂಶಗಳನ್ನು ಬಳಸಿಕೊಳ್ಳದೆ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಭತ್ತ, ಜೋಳ, ಮೆಕ್ಕೆಜೋಳ ಹಾಗೂ ದಿನ ಬಳಕೆ ತರಕಾರಿಯನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಯಲ್ಲಿ 8 ಎಮ್ಮೆ ಸಾಕಣಿಕೆಯನ್ನು ಸಹ ಮಾಡುತ್ತಿದ್ದಾರೆ. ಎಮ್ಮೆ ಸಾಕಣಿಕೆಯಿಂದ ಮತ್ತೆ 5 ಕರುಗಳು ಜನನವಾಗಿದ್ದು, ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಒಂದು ಎಮ್ಮೆ ಪ್ರತಿದಿನ ನಾಲ್ಕು ಲೀಟರ್ ಹಾಲನ್ನು ನೀಡುತ್ತಿದ್ದು, ಬಹುತೇಕ ಹಾಲನ್ನು ಡೈರಿಗೆ ಸಾಗಿಸಲಾಗುತ್ತಿದೆ. ಉಳಿದ ಹಾಲನ್ನು ದೇವದಾಸಿಯರು ಹಂಚಿಕೊಂಡು ಬಳಸುತ್ತಾರೆ.
ವ್ಯವಸಾಯದಲ್ಲಿ ಗುಂಪು ಉಳಿತಾಯ ಖಾತೆಯನ್ನು ತೆರೆದಿದ್ದು, ಅದರಲ್ಲಿ ಹಣ ನೇರವಾಗಿ ಜಮೆ ಆಗುತ್ತಿದೆ. ಈ ಕೃಷಿ ಚಟುವಟಿಕೆಯನ್ನು ಜೂನ್ ತಿಂಗಳಿಂದ ಪ್ರಾರಂಭಿಸಿದ್ದು, ಇನ್ನು ಕೆಲ ತಿಂಗಳಿನಲ್ಲಿ ಆದಾಯ ಬರಲು ಆರಂಭವಾಗುತ್ತದೆ. ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬನೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರಿಗೆ ಸಖಿ ಟ್ರಸ್ಟ್ ವತಿಯಿಂದ ಕೃಷಿ ಕುರಿತ ತರಬೇತಿಯನ್ನು ಕೊಡಿಸಲಾಗುತ್ತಿದೆ. ಅಲ್ಲದೇ, ಆರು ತಿಂಗಳು ಕಾಲ ಪ್ರತಿಯೊಬ್ಬ ದೇವದಾಸಿ ಮಹಿಳೆಯರಿಗೆ ಮೂರು ಸಾವಿರ ರೂ. ಧನಸಹಾಯ ಸಹ ನೀಡಲಾಗುತ್ತದೆ. ಬಳಿಕ ಅವರಿಗೆ ಕೃಷಿಯಿಂದ ಬಂದ ಆದಾಯವನ್ನು ಹಂಚಿಕೆ ಮಾಡಲಾಗುತ್ತದೆ.
ಮುಂಬರುವ ದಿನಗಳಲ್ಲಿ ಈ ಮಹಿಳೆಯರು ಕುರಿ ಸಾಕಣಿಕೆ ಮಾಡುವ ಆಲೋಚನೆಯನ್ನು ಸಹ ಹೊಂದಿದ್ದಾರೆ. ಈ ಮೊದಲು ದೇವದಾಸಿಯರು ಬೇರೆಯವರ ಹೊಲದಲ್ಲಿ ದುಡಿಯಲು ಹೋಗುತ್ತಿದ್ದರು. ಆದರೆ, ಇದೀಗ ಮನೆ ಕೆಲಸವನ್ನು ನಿರ್ವಹಿಸುತ್ತ ಕೃಷಿಯಲ್ಲಿ ನೆಮ್ಮದಿ ಜೀವನವನ್ನು ಕಂಡುಕೊಂಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವುದರಿಂದ ಅಭದ್ರತೆ ಕಾಡುತ್ತದೆ. ಹಾಗಾಗಿ ಸರ್ಕಾರ 50 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಭೂಮಿಗಳನ್ನು ಕೊಡಬೇಕು. ಇದರಿಂದ ತಮ್ಮ ಜೀವನಕ್ಕೆ ಭದ್ರತೆ ಸಿಗುತ್ತದೆ ಎಂಬುದು ದೇವದಾಸಿಯರ ಒತ್ತಾಸೆಯಾಗಿದೆ.
'ಈಟಿವಿ ಭಾರತ'ದೊಂದಿಗೆ ಸಖಿ ಟ್ರಸ್ಟ್ ಸಂಸ್ಥಾಪಕಿ ಡಾ. ಎಂ. ಭಾಗ್ಯಲಕ್ಷ್ಮೀ ಮಾತನಾಡಿ, ದೇವದಾಸಿಯರು ಸ್ವಾಲಂಬನೆ ಹೊಂದಬೇಕಾಗಿದೆ. ಹಾಗಾಗಿ ನಾಗೇನಹಳ್ಳಿ ದೇವದಾಸಿ ಮಹಿಳೆಯರಿಗೆ ಸಹಕಾರವನ್ನು ನೀಡಲಾಗುತ್ತಿದ್ದು, ಇದಕ್ಕೆ ಅಜೀಂ ಪ್ರೇಮ್ ಜಿ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದೆ. ಆರು ತಿಂಗಳ ಕಾಲ ಆಹಾರ ಕಿಟ್ಗಳನ್ನು ಸಹ ನೀಡಲಾಗುತ್ತದೆ ಎಂದು ಹೇಳಿದರು.
ದೇವದಾಸಿ ಮಹಿಳೆ ಹುಲಿಗೆಮ್ಮ ಮಾತನಾಡಿ, ಈ ಮೊದಲು ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೆವು. ಅದು ನಿಂತು ಹೋಯಿತು. ಆ ವೇಳೆ ಸಖಿ ಸಂಸ್ಥೆ ನಮ್ಮ ಕೈ ಹಿಡಿಯಿತು. ಮಕ್ಕಳೀಗ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ನಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು. ದೇವದಾಸಿ ಸೋಮಕ್ಕ ಮಾತನಾಡಿ, ಈ ಮೊದಲು ಕೃಷಿ ಬಗ್ಗೆ ತಿಳಿದರಲಿಲ್ಲ. ಈಗ ಕೃಷಿಯನ್ನು ಮಾಡುವ ಮೂಲಕ ಸ್ವಾವಲಂಬಿ ಆಗುತ್ತಿದ್ದೇವೆ. ಸಖಿ ಸಂಸ್ಥೆ ನಮ್ಮ ಕಷ್ಟ-ಸುಖಕ್ಕೆ ಬೆನ್ನಲುಬಾಗಿ ನಿಂತಿದೆ ಎಂದು ಸಂತಸ ವ್ಯಕ್ತಪಡಿಸಿದರು.