ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಹರಿಶಂಕರ ಗುಡ್ಡದಲ್ಲಿ ಖನಿಜ ನಿಕ್ಷೇಪ ಪತ್ತೆಯಾಗಿರೋದು ನನ್ನ ಗಮನಕ್ಕೆ ಬಂದಿದೆ. ಅದರ ಸರ್ವೆಗೆ ವಾಯು ಮಾಲಿನ್ಯ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಅವರ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹರಿಶಂಕರ ಗುಡ್ಡದಲ್ಲಿ ಪತ್ತೆಯಾಗಿರೋದು ನೈಜ ಅದಿರಿನ ಖನಿಜ ನಿಕ್ಷೇಪನಾ ಎಂದು ತಿಳಿಯಬೇಕಿದೆ. ಹೀಗಾಗಿ, ವಾಯು ಮಾಲಿನ್ಯ ಅಧಿಕಾರಿ ವರ್ಗ ಅಲ್ಲಿಗೆ ತೆರಳಿ ವರದಿ ಮಾಡಲಿದೆ. ಆ ವರದಿ ನನಗೆ ಬಂದ ಬಳಿಕ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತವು ಬದ್ಧವಾಗಿದೆ ಎಂದರು.
ಬಳ್ಳಾರಿ- ಹೊಸಪೇಟೆ (ಆಂಕೋಲ- ಗುತ್ತಿ) ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕುರಿತ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಈಗಾಗಲೇ ನ್ಯಾಷನಲ್ ಹೈವೇ ಅಥಾರಿಟಿ ಬೋರ್ಡ್ ಗ್ಯಾಮನ್ ಇಂಡಿಯಾಗೆ ಮತ್ತೊಂದು ಅವಕಾಶ ನೀಡಿದೆ. ವಿಪರೀತ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಬಿರುಕು ಬಿಟ್ಟ ಈ ರಸ್ತೆಯ ದುರಸ್ತಿಗೆ ಈಗಾಗಲೇ ಒಂದಿಷ್ಟು ಮೊತ್ತವನ್ನು ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಯ ನಡುಭಾಗದಲ್ಲಿ ಬಿರುಕು ಬಿಟ್ಟಿರೋದನ್ನು ದುರಸ್ತಿ ಮಾಡಿದರೆ ಸಾಲದು. ಸಮಗ್ರ ರಸ್ತೆಯ ಅಭಿವೃದ್ಧಿ ಆಗಬೇಕಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಹೈವೇ ಅಥಾರಿಟಿ ಅವರು ಏನು ಕ್ರಮ ಕೈಗೊಳ್ಳಲಿದ್ದಾರೆಂಬುದು ಕಾದು ನೋಡಬೇಕಿದೆ ಎಂದರು.
ಜಿಂದಾಲ್ ಸಮೂಹ ಸಂಸ್ಥೆಯ ಬಸ್ ಸಂಚಾರ ವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿರುವ ಅವರು, ಈ ಹಿಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜಿಂದಾಲ್ ಸಮೂಹ ಸಂಸ್ಥೆಯು ಬಸ್ ಸಂಚಾರ ಮಾಡುತ್ತಿದೆ ಎಂಬ ದೂರಿನ ಹಿನ್ನೆಲೆ ಅದನ್ನ ತಡೆಯಲಾಗಿತ್ತು. ಇದೀಗ ಬಳ್ಳಾರಿ - ತೋರಣಗಲ್ಲಿಗೆ ತೆರಳುವ ರಸ್ತೆ ಮಾರ್ಗ ಹದಗೆಟ್ಟಿದ್ದು, ಅಪಘಾತ ವಲಯ ಇದಾಗಿದೆ ಎಂಬ ಅನಿಸಿಕೆಯನ್ನ ತಾವು ವ್ಯಕ್ತಪಡಿಸಿದ್ದೀರಿ.
ಯಾಕೆಂದರೆ, ಇದು ಜಿಂದಾಲ್ ಸಮೂಹ ಸಂಸ್ಥೆಯ ಆಂತರಿಕ ವಿಚಾರವಾಗಿರುವುದರಿಂದ ಅದನ್ನು ನಾವು ಹೇಳೋಕೆ ಬರಲ್ಲ. ಈ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ನಾವು ಸಲಹೆ ಮಾಡಬಹುದು ಅಷ್ಟೇ.. ಅದು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡೇ ಮಾಡಬೇಕು ಎಂದರು.