ಹೊಸಪೇಟೆ: ಸುಗಂಧಿ ಬಾಳೆ ಬೆಳೆಗಾರರು ದರ ಸಿಗದೇ ಸಂಕಷ್ಟಕ್ಕೀಡಾಗಿದ್ದಾರೆ. ಕಮಲಾಪುರ, ಕಡ್ಡಿರಾಂಪುರ, ವೆಂಕಟಾಪುರ, ಕಂಪ್ಲಿ ಭಾಗದ ನೂರಾರು ಎಕೆರೆಯಲ್ಲಿ ಬಾಳೆ ಬೆಳೆಯಲಾಗುತ್ತಿದೆ.
ಈ ಭಾಗದಲ್ಲಿ 2 ಸಾವಿರ ಎಕೆರೆಯಲ್ಲಿ ಬಾಳೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಕಳೆದ ಬಾರಿಗಿಂತ ಉತ್ತಮವಾಗಿ ಮಳೆಯಾಗಿದೆ. ಆದರೆ, ರೈತರಿಗೆ ಲಾಭ ಮಾತ್ರ ಸಿಗುತ್ತಿಲ್ಲ. ದರದ ಏರಳಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ದಲ್ಲಾಳಿಗಳ ಹಾವಳಿ: ಕೊರೊನಾ ನೆಪವೊಡ್ಡಿ ದಲ್ಲಾಳಿಗಳು ಮನಸೋ ಇಚ್ಛೆ ದರವನ್ನು ನಿಗದಿ ಮಾಡುತ್ತಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಏಲಕ್ಕಿ ಬಾಳೆ ಕೆಜಿ 40 ರೂ. ದರ ಸಿಗುತ್ತಿದೆ. ಆದರೆ, ಸುಗಂಧಿ ಬಾಳೆಗೆ ಕನಿಷ್ಠ ಬೆಳೆ ಸಿಗದೇ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಸಂಕಷ್ಟದಲ್ಲಿ ರೈತ: ಚಳಿಗೆ ಬಾಳೆಹಣ್ಣಿನ ಗೋಣಿಗಳು ಹಣ್ಣುಗಳ ಆಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆ ತಗೆದುಕೊಂಡು ಹೋಗಲು ದರವಿಲ್ಲ. ನೂರಾರು ರೈತರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದಂತಾಗಿದೆ. ಕೊರೊನಾದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಈಗ ಬಾಳೆಗೆ ದರವಿಲ್ಲದಿರುವುದು ಗಾಯದ ಮೇಳೆ ಬರೆ ಎಳೆದಂತಾಗಿದೆ.
ಬೆಳೆಯಲು ಖರ್ಚುಯೇಷ್ಟು?: ಒಂದು ಗೋಣೆಯಲ್ಲಿ 20 ರಿಂದ 25 ಕೆ.ಜಿ. ಇಳುವರಿ ಬರುತ್ತದೆ. ಇದಕ್ಕೆ ಒಂದು ವರ್ಷಕವಾಗಿ 120 ರಿಂದ 140 ರೂ. ಖರ್ಚು ತಗಲುತ್ತದೆ. ಈಗ 6 ರೂ.ಕೆಜಿ ಮಾರಾಟ ಮಾಡಿದರೇ ರೈತರಿಗೆ ಹಾಕಿದಂತ ಬಂಡವಾಳ ಬರದಂತ ಸ್ಥಿತಿ ಎದುರಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಸುಗಂಧಿ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಆದರೆ, ತೋಟಗಾರಿಕೆ ಇಲಾಖೆಯು ಕಣ್ಣು ಮುಚ್ಚಿ ಕುಳಿತುಕೊಂಡಿದೆ. ರೈತರ ನೆರವಿಗೆ ಬಾರದೇ ನಿರ್ಲಕ್ಷತನವನ್ನು ತೋರಿಸುತ್ತಿದೆ. ನೆಪಮಾತ್ರಕ್ಕೆ ಇಲಾಖೆ ಇದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.
ಸರ್ಕಾರದಿಂದ ದರ ನಿಗದಿ ಆಗ್ರಹ: ಕಮಲಾಪುರ, ಕಡ್ಡಿರಾಂಪುರ, ವೆಂಕಟಾಪುರ, ಕಂಪ್ಲಿ ಭಾಗದಲ್ಲಿ ಸುಗಂಧಿ ಬಾಳೆಯನ್ನು ಬೆಳೆಯಲಾಗುತ್ತಿದೆ. ಈ ಬೆಳೆಯನ್ನು ನೂರಾರು ರೈತರು ನೆಚ್ಚಿಕೊಂಡಿದ್ದಾರೆ. ಹಾಗಾಗಿ ತೋಟಗಾರಿಕೆ ಇಲಾಖೆಯು ರೈತರಿಗೆ ನ್ಯಾಯಕೊಡಿಸಲು ಮುಂದಾಗಬೇಕು. ಕಷ್ಟಪಟ್ಟು ಬೆಳೆದ ರೈತರಿಗೆ ಸಮರ್ಪಕವಾದ ದರ ಸಿಗುವಂತೆ ತೋಟಗಾರಿಕೆ ಇಲಾಖೆ ಮಾಡಬೇಕಾಗಿದೆ.
ಕಡ್ಡಿರಾಂಪುರ ರೈತ ಷಣ್ಮುಖಗೌಡ ಅವರು ಮಾತನಾಡಿ, ಸುಗಂಧಿ ಬಾಳೆ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಏಲಕ್ಕಿ ಒಳ್ಳೆಯ ದರವಿದೆ. ಆದರೆ, ನಮ್ಮ ಭೂಮಿಗೆ ಏಲಕ್ಕಿ ಬೆಳೆಯಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಯಾವುದೇ ಕ್ರಮಕೈಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಡ್ಡಿರಾಂಪುರ ರೈತ ಪಂಪನಗೌಡ ಅವರು ಮಾತನಾಡಿ, ಎರಡು ಮಾದರಿಯಲ್ಲಿ ಬಾಳೆ ಬೆಳೆ ಬರುತ್ತದೆ. ಒಂದು ಏಲಕ್ಕಿ, ಮತ್ತೊಂದು ಸುಗಂಧಿ. ಹಂಪಿ ಮತ್ತು ಕಡ್ಡಿರಾಂಪುರ ಭಾಗದಲ್ಲಿ ಹೆಚ್ಚಾಗಿ ಸುಗಂಧಿಯನ್ನು ಬೆಳೆಯಲಾಗುತ್ತದೆ. ಆದರೆ, ರೈತರಿಗೆ ದರದ ಮೂಲಕ ಶೋಷಣೆ ಮಾಡಲಾಗುತ್ತಿದೆ. ಕಮಲಾಪುರ ಹಾಗೂ ಹೊಸಪೇಟೆ ಮಧ್ಯವರ್ತಿಗಳು ರೈತರನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ದೂರವಾಣಿ ಮೂಲಕ ಹಲವು ಬಾರಿ ಪ್ರಯತ್ನಿಸಿದಾಗ ತೋಟಗಾರಿಕೆ ಇಲಾಖೆಯ ರಾಜೇಂದ್ರ ಅವರು ಕರೆಯನ್ನು ಸ್ವೀಕರಿಸಲಿಲ್ಲ.