ಬಳ್ಳಾರಿ: ಬಡವರ ಪಾಲಿಗೆ ಸಂಜೀವಿನಿ ಆಗಬೇಕಾದ ಬಳ್ಳಾರಿ ವಿಮ್ಸ್ ಆಸ್ಪತ್ರೆ ನರಕವಾಗ್ತಿದೆ. ವೆಂಟಿಲೇಟರ್ಗೆ ವಿದ್ಯುತ್ ಸಪ್ಲೈ ಅಭಾವದಿಂದ ಮೃತಪಟ್ಟವರ ಒಂದೊಂದೇ ವಿಡಿಯೋಗಳು ವೈರಲ್ ಆಗ್ತಿವೆ. ಇದರ ಮಧ್ಯೆ ಇಂದೂ ಕೂಡಾ ನಿಖಿಲ್ ಎಂಬ ಎಂಟು ವರ್ಷದ ಬಾಲಕನ ಸಾವಿನ ವಿಡಿಯೋ ವೈರಲ್ ಆಗಿದೆ. ಮತ್ತೊಂದೆಡೆ ಹೆರಿಗೆ ಬಳಿಕ ಮಗು ಸಮೇತ ಮಹಿಳೆ ಮೃತ ಪಟ್ಟಿರುವುದು ಕೂಡ ವಿದ್ಯುತ್ ಸಂಪರ್ಕ ಸ್ಥಗಿತದಿಂದ ಅನ್ನೋ ಆರೋಪ ಕೇಳಿ ಬರುತ್ತಿವೆ. ತನಿಖಾ ಸಮಿತಿ ಇಂದು ಭೇಟಿ ನೀಡಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ವಿಮ್ಸ್ನಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ ವೆಂಟಿಲೇಟರ್ ಸ್ಟಾಪ್ ಆಗಿ ಸಾವನ್ನಪ್ಪಿದವರ ಸಂಖ್ಯೆ ಇಂದು ಆರಕ್ಕೇರಿದೆ. 14 ರಂದೇ ಡೆಂಘಿಯಿಂದ ಬಳಲುತ್ತಿದ್ದ ಸಿರಗುಪ್ಪದ ಬಾಲಕ ನಿಖಿಲ್ ಮೃತಪಟ್ಟ ವಿಡಿಯೋ ಇಂದು ವೈರಲ್ ಆಗಿದೆ. ಇದರಲ್ಲಿ ನಿಖಿಲ್ ಪೋಷಕರು ನೇರವಾಗಿ ವಿಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ. ಅವರು ಕರೆಂಟ್ ಹೋದ ಕೆಲವೇ ಹೊತ್ತಿನಲ್ಲಿ ಮಗನ ಸಾವಾಗಿದೆ ಅಂತ ಆರೋಪ ಮಾಡಿದ್ದಾರೆ.
ಬಲೂನ್ ಸಹಾಯದಿಂದ ಕೃತಕ ಉಸಿರಾಟ: ವಿದ್ಯುತ್ ಸಮಸ್ಯೆಯಿಂದ ವಿಮ್ಸ್ನಲ್ಲಿ ಸಾವುಗಳಾಗುತ್ತಿವೆ ಎಂಬ ಮಾತಿಗೆ ಇವರ ಆರೋಪ ಪುಷ್ಟಿ ನೀಡುತ್ತಿದ್ದು, ಇದಕ್ಕೆ ವಿಮ್ಸ್ ಏನು ಹೇಳುತ್ತೋ ಕಾದು ನೋಡಬೇಕು. ಈ ನಡುವೆ ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದ ಜ್ಯೋತಿ ಅನ್ನೋ ಗರ್ಭಿಣಿ ಮಹಿಳೆ ಹೆರಿಗೆ ವೇಳೆ ನವಜಾತ ಶಿಶು ಜೊತೆ ಮೃತಪಟ್ಟಿದ್ದಾರೆ. ಕರೆಂಟ್ ಸ್ಥಗಿತವಾದಾಗ ಈ ದುರಂತವಾಗಿದೆ ಅಂತಾ ಪೋಷಕರು ಆರೋಪ ಮಾಡಿದ್ದಾರೆ.
ವಿಮ್ಸ್ಗೆ ಭೇಟಿ ನೀಡಿದ ಐದು ಜನರ ತಂಡ: ಇನ್ನೂ ಈಗಾಗಲೇ ಸೆಪ್ಟೆಂಬರ್ 14 ರಿಂದ ಇಂದಿನವರೆಗೂ ಆರು ಜನ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಇಂದು ಬೆಳಗ್ಗೆ ಈ ಸಾವುಗಳ ತನಿಖೆಗೆ ಸರ್ಕಾರ ನೇಮಕ ಮಾಡಿರೋ ಡಾ. ಸ್ಮಿತಾ ನೇತೃತ್ವದ ಐದು ಜನರ ತಂಡ ವಿಮ್ಸ್ಗೆ ಭೇಟಿ ನೀಡಿ ಪರಿಶೀಲನೆ ಸಹ ಮಾಡಿತ್ತು. ಈ ವೇಳೆ ಡೈರೆಕ್ಟರ್ ಗಂಗಾಧರಗೌಡ ಕ್ಯಾಬಿನ್ಗೆ ತೆರಳಿದ ತಂಡ ಅವರಿಂದ ಮಾಹಿತಿ ಪಡೆಯಿತು.
ಆದಷ್ಟು ಬೇಗ ವರದಿ ಸಲ್ಲಿಕೆ: ತನಿಖೆಗೆ ಆಗಮಿಸಿರುವ ತಂಡದ ಅಧ್ಯಕ್ಷ ಡಾ.ಸ್ಮಿತಾ ಮಾತನಾಡಿ, ತನಿಖೆಗೆ ಆಗಮಿಸಿದ್ದೇವೆ, ತನಿಖೆ ನಡೆಯುತ್ತಿದೆ. ಪರಿಶೀಲನೆ ನಂತರದಲ್ಲಿ ವರದಿ ಸಿದ್ಧಪಡಿಸಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ತನಿಖಾ ಸಂಸ್ಥೆಯಲ್ಲಿ ಬೆಂಗಳೂರಿನ ಬಿಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ.ಸ್ಮಿತಾ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ.ಸಿದ್ದಿಕಿ ಅಹಮದ್, ಬಿಎಂಸಿಯ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ.ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಯಕ ಅಭಿಯಂತರ ಯೋಗೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಉಮಾ ಕೆ.ಎ. ಅವರನ್ನೊಳಗೊಂಡ ತಂಡ ವಿಮ್ಸ್ಗೆ ಭೇಟಿ ನೀಡಿ ಪರಿಶೀಲಿಸುತ್ತಿದೆ.
ಡೈರೆಕ್ಟರ್ ಗಂಗಾಧರಗೌಡ ಅವರಿಗೆ ಕ್ಲಾಸ್: ಹಾಗೆಯೇ ಐಸಿಯು ವಾರ್ಡ್ಗೆ ವಿದ್ಯುತ್ ಸಂಪರ್ಕವಾಗಿರೋದನ್ನೂ ಪರಿಶೀಲಿಸಿತು. ಐಸಿಯು ವಾರ್ಡ್ಗೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲನೆ ನಡೆಸಿತು. ಇನ್ನು ಇದರ ನಡುವೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ನೇತೃತ್ವದಲ್ಲಿ ಕೈ ಸದಸ್ಯರು ವಿಮ್ಸ್ಗೆ ಭೇಟಿ ನೀಡಿ ಡೈರೆಕ್ಟರ್ ಗಂಗಾಧರಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡರು.
ವಿಮ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯ : ಜನರ ಪಾಲಿನ ಸಂಜೀವಿನಿಯಾಗಬೇಕಿದ್ದ ವಿಮ್ಸ್ ಅವರ ಪಾಲಿಗೆ ನರಕವಾಗ್ತಿರೋದು ಮಾತ್ರ ಸತ್ಯ. ವಿಮ್ಸ್ನಲ್ಲಿ ನಡೆದ ಘನಘೋರಾ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ವಿಮ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯ ಗೊತ್ತಾಗಲಿದೆ.
ಓದಿ: ವಿಮ್ಸ್ಗೆ ಆಗಮಿಸಿದ ವೈದ್ಯೆ ಸ್ಮಿತಾ ನೇತೃತ್ವದ ತನಿಖಾ ಸಮಿತಿ: ಮಾಹಿತಿ ಸಂಗ್ರಹ