ಹೊಸಪೇಟೆ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆಯೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ನಿನ್ನೆ ಸಂಜೆ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸವದಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಯಾರಿಗೂ ಕೊರೊನಾ ವೈರಸ್ ಹರಡಿಲ್ಲ. ಎಲ್ಲಾ ಕೇಸ್ಗಳು ನೆಗೆಟಿವ್ ಎಂದು ವರದಿಯಾಗಿವೆ. ಎಲ್ಲಾ ಕೆಲಸವನ್ನು ಅಧಿಕಾರಿಗಳು ಮಾಡುವುದು ಕಷ್ಟ ಸಾಧ್ಯ. ಜನರ ಸಹಕಾರವೂ ಅಗತ್ಯ. ಹಾಗಾಗಿ ಜನರು ರಸ್ತೆಯಲ್ಲಿ ಖಾಲಿ ತಿರುಗಾಡದೇ ಮನೆಯಲ್ಲಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು.
ಕೂಲಿ ಕಾರ್ಮಿಕರಿಗೆ ಅನುಕೂಲಕರವಾಗುವಂಥ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಮನೆಗಳಿಗೆ ಹಾಲು ಮತ್ತು ತರಕಾರಿಯ ಸೌಲಭ್ಯಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ.
ಕಾರ್ಮಿಕರಿಗೆ ಅಕ್ಕಿ, ತರಕಾರಿಗಳನ್ನು ಕೊಡುವುದು ಮತ್ತು ಕೆಲಸವನ್ನು ಮಾಡುವ ಕಾರ್ಮಿಕರಿಗೆ ಸರ್ಕಾರ ಪಿಎಫ್ ಅನ್ನು ಭರಿಸಲಿಸದೆ. ಇದು ಮೂರು ತಿಂಗಳ ಕಾಲ ನಡೆಯುತ್ತದೆ ಎಂದು ಅವರು ಹೇಳಿದರು.
ಕೊಪ್ಪಳ, ರಾಯಚೂರು, ಬಳ್ಳಾರಿಯ ಕೃಷಿಗೆ ಸಂಬಂಧಿಸಿದಂತೆ ಭತ್ತದ ಮಷಿನ್ಗಳನ್ನು ಪೂರೈಸಲಾಗುತ್ತದೆ. ಮರು ಸಾಲವನ್ನು ಜೂನ್ ತಿಂಗಳ ತನಕ ಮುಂದೂಡಲಾಗಿದೆ. ಜನರಿಗೆ ಬೇಕಾಗುವ ದಿನ ಬಳಕೆಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಪಿಎಲ್ಡಿ ಮತ್ತು ಎಸ್ಎಲ್ವಿ ಬ್ಯಾಂಕ್ನಲ್ಲಿ ಸಾಲವನ್ನು ಮಾಡಿದವರಿಗೆ ಬಡ್ಡಿಯನ್ನು ಮನ್ನಾ ಮಾಡಿದ್ದು, ಅಸಲು ಕಟ್ಟಿದವರಿಗೆ ಇದು ಅನ್ವಯವಾಗುತ್ತದೆ ಎಂದು ಹೇಳಿದರು.
ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತವು ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದು, ಕೊರೊನಾ ವೈರಸ್ ತಡೆಗೆ ಸಂಬಂಧಿಸಿದ ಮುಂದಾಲೋಚನೆಯನ್ನು ಮಾಡಿದೆ. ಅನಾವಶ್ಯಕವಾಗಿ ತಿರುಗಾಡುವ ಜನರಿಗೆ ತಿಳುವಳಿಕೆಯನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಗಲಿರುಳು ಕೆಲಸವನ್ನು ಮಾಡುತ್ತಿದ್ದು, ಇವರಿಗೆ ಜನರು ಸಹಕಾರ ನೀಡಬೇಕು. ಒಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳವುದು ಮುಖ್ಯ ಎಂದು ತಿಳಿಸಿದರು.