ಹೊಸಪೇಟೆ : ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುವವರನ್ನು ಪ್ರಧಾನಿ ಮಾಡಿದ್ದು ಭಾರತೀಯ ಜನತಾ ಪಾರ್ಟಿ. ಹಾಗೆಯೇ ದೇಶದ ಇತಿಹಾಸದಲ್ಲಿ ಸೋತಿರುವ ವ್ಯಕ್ತಿಯನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಬಿಜೆಪಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿರುವುದಕ್ಕೆ ಗರ್ವ ಮತ್ತು ಅಭಿಮಾನವಿದೆ.
ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ಗೌರವ ನೀಡುತ್ತದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ನೀಡುವವರು ಗೆಲ್ಲುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಹೂವಿನಂತಿರುವ ಸಾಮಾನ್ಯ ಚಹಾ ಮಾರುವ ವ್ಯಕ್ತಿ ಬಂದಿರುವುದರಿಂದ ಕಲ್ಲಿನಂತಿರುವ ಕಾಂಗ್ರೆಸ್ ಪುಡಿ ಪುಡಿಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಹಂಪಿ ಅಥವಾ ವಿಜಯನಗರ ಜಿಲ್ಲೆಯನ್ನು ಮಾಡಬೇಕೇ ಎಂದು ಕೇಳಿದಾಗ, ಆನಂದ ಸಿಂಗ್ ವಿಜಯನಗರ ಜಿಲ್ಲೆಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಮಾಡಲು ಹಣಕಾಸಿನ ತೊಂದರೆ ಇದೆ. ಸದ್ಯಕ್ಕೆ ಬೇಡ ಎಂದಿದ್ದರು. ಆದರೆ, ಅವರು ಆನಂದ ಸಿಂಗ್ ಬೇಡಿಕೆಯನ್ನು ಈಡೇರಿಸಿದರು ಎಂದರು.
ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಮಾತನಾಡಿ, ವಿಜಯನಗರ ಜಿಲ್ಲೆ ಕುರಿತು ಇನ್ನು ಜನರು ಚರ್ಚೆಯಲ್ಲಿದ್ದಾರೆ. ಶೇ.80ರಷ್ಟು ವಿಜಯನಗರ ಜಿಲ್ಲೆಯಾಗಿದೆ.
ಇನ್ನು, ಶೇ.20ರಷ್ಟು ಬಳ್ಳಾರಿ ಎನ್ನುತ್ತಿದ್ದಾರೆ. ಜಿಲ್ಲೆಯ ರಚನೆ ಕುರಿತು ಕ್ಷೇತ್ರದ ಜನರು ಆತಂಕದಲ್ಲಿದ್ದಾರೆ. ಯಾವುದನ್ನು ನಂಬೋಕೆ ಆಗುತ್ತಿಲ್ಲ ಜನರಿಗೆ. ಅದೇ ಪರಿಸ್ಥಿತಿ ನಂಗೂ ಬಂದಿದೆ. ಜಿಲ್ಲೆಯ ಕುರಿತು ಏನು ಮಾತನಾಡಬೇಕು ಎಂಬುದು ನಂಗೆ ತಿಳಿಯುತ್ತಿಲ್ಲ ಎಂದು ಹೇಳಿದರು.