ಬಳ್ಳಾರಿ: ಕೊರೊನಾ ವಾರಿಯರ್ಸ್ ಕೋವಿಡ್ ಸಂದರ್ಭದಲ್ಲಿ ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್.ಎಸ್.ನಕುಲ್ ಸಂತಸ ವ್ಯಕ್ತಪಡಿಸಿದ್ದಾರೆ.
![dc nakul talk about bellary corona worriers work](https://etvbharatimages.akamaized.net/etvbharat/prod-images/kn-01-bly-020121-redcross-service-letter-news-ka10007_02012021193302_0201f_1609596182_153.jpg)
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣ ಲೆಕ್ಕಿಸದೆ ಸೇವೆ ಸಲ್ಲಿಸಿದ ಕೋವಿಡ್ ವಾರಿಯರ್ಸ್ಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಕೊರೊನಾ ಸೈನಿಕರು ಕೋವಿಡ್ ಕುರಿತು ಜಾಗೃತಿ, ಮಾಸ್ಕ್ ವಿತರಣೆ, ಹ್ಯಾಂಡ್ ವಾಶ್ ಪ್ಲಾಟ್‍ಫಾರಂ, ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಸ್ಥಳಕ್ಕೆ ತೆರಳುವಂತೆ ನೋಡಿಕೊಂಡಿರುವುದು, ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ, ಆಹಾರ ವಿತರಣೆ ಸೇರಿದಂತೆ ಅನೇಕ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು.
![dc nakul talk about bellary corona worriers work](https://etvbharatimages.akamaized.net/etvbharat/prod-images/kn-01-bly-020121-redcross-service-letter-news-ka10007_02012021193302_0201f_1609596182_469.jpg)
ಓದಿ: ರಾಜ್ಯದಲ್ಲಿಂದು 755 ಮಂದಿಗೆ ಕೋವಿಡ್ ದೃಢ: ಮೂವರು ಸೋಂಕಿತರು ಬಲಿ
ವಲಸೆ ಕಾರ್ಮಿಕರಿಗೆ ಊಟೋಪಚಾರ, ಔಷಧ ಒದಗಿಸುವಿಕೆ, ರಕ್ತದಾನ, ಐಸಿಯುನಲ್ಲಿರುವವರ ಮಾನಸಿಕ ಸಮಾಲೋಚನೆ ಸೇರಿದಂತೆ ಅನೇಕ ಕಾರ್ಯಗಳನ್ನು ಕೊರೊನಾ ಸೈನಿಕರು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೊರೊನಾ ಸೈನಿಕರು ಬಳ್ಳಾರಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಕೋವಿಡ್ ಹರಡುತ್ತಿದ್ದ ಪ್ರಮುಖ ಕಾಲಘಟ್ಟದಲ್ಲಿ ಸಮೀಕ್ಷೆ ನಡೆಸಿದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ತನ್ನ ವರದಿಯಲ್ಲಿ ತಿಳಿಸಿದೆ. ಇದೇ ಮಾದರಿಯನ್ನು ಎಲ್ಲೆಡೆ ವಿಸ್ತರಿಸಬೇಕು ಎಂದು ತಿಳಿಸಿರುವುದು ನಮ್ಮ ಜಿಲ್ಲೆಯ ಕೊರೊನಾ ಸೈನಿಕರ ಸಾಹಸ ಕಾರ್ಯಕ್ಕೆ ಸಂದ ಗೌರವ ಎಂದರು.
ಕೋವಿಡ್ ಸಮಯದಲ್ಲಿ ಹಸಿವಿನಿಂದ ಬಳಲುತ್ತಿದ್ದಂತ ನೂರಾರು ಜನರಿಗೆ ನೀವು ಧ್ವನಿಯಾಗಿ ಕೆಲಸ ಮಾಡಿದ್ದೀರಿ. ತುಂಬಾ ಜನ ಒಂದೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಕಷ್ಟದ ಸಮಯದಲ್ಲಿ ನಿರಾಶ್ರಿತರಿಗೆ ಹೆಗಲು ನೀಡಿದ್ದೀರಿ. ಬಡಜನರ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದರು.