ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಯು.ರಾಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಭೂಮಿಯನ್ನು ಜಿಂದಾಲ್ ಕಾರ್ಖಾನೆ ಸೋಲಾರ್ ಪ್ಲ್ಯಾಂಟ್ ಹಾಕಲು ಕಡಿಮೆ ಹಣದಲ್ಲಿ ಗುತ್ತಿಗೆ ಪಡೆಯಲು ಮುಂದಾಗಿದ್ದು, ಹೆಚ್ಚಿನ ಹಣಕ್ಕೆ ಗುತ್ತಿಗೆ ಪಡೆಯಲಿ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಆಗ್ರಹಿಸಿದರು.
ನಗರದ ತುಂಗಭದ್ರಾ ರೈತ ಸಂಘದ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಾರ್ಖಾನೆ ಹೊರಸೂಸುವ ಧೂಳಿನಿಂದ 3 ಸಾವಿರ ಎಕರೆ ಭೂಮಿಯಲ್ಲಿ15 ವರ್ಷದಿಂದ ಏನು ಬೆಳೆಯಲಾಗುತ್ತಿಲ್ಲ. ಈ ಭೂಮಿಯಲ್ಲಿ ಸೋಲಾರ್ ಪ್ಲ್ಯಾಂಟ್ ಹಾಕಲು ಜಿಂದಾಲ್ ಮುಂದೆ ಬಂದಿದ್ದು, ಕೇವಲ ವರ್ಷಕ್ಕೆ 20 ಸಾವಿರ ರೂ.ಗೆ ಗುತ್ತಿಗೆ ನೀಡಲು 1600 ರೈತರಿಗೆ ಒಪ್ಪಿಗೆ ಪತ್ರ ನೀಡುತ್ತಿದೆ. ಇದು ಸರಿಯಲ್ಲ. ಪ್ರತಿ ಎಕರೆಗೆ ಒಂದು ವರ್ಷಕ್ಕೆ ಗುತ್ತಿಗೆಗೆ 35 ಸಾವಿರ ರೂ.ಕೊಡಬೇಕು ಹಾಗೂ ಶೇ.5ರಷ್ಟು ಹೆಚ್ಚಿಗೆ ಮಾಡಬೇಕು. ಮುಂಗಡವಾಗಿ 50 ಸಾವಿರ ರೂ.ಕೊಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಕೃಷಿ ಕುಟುಂಬದ ಸದಸ್ಯರಿಗೆ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕು. ಯು.ರಾಜಾಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಉಚಿತ ವಿದ್ಯುತ್ ನೀಡಬೇಕು. ಶಾಲಾ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿ ವೇಳೆ ರಾಜಾಪೂರ ಗ್ರಾಮದ ರೈತರಾದ ಡಿ.ಎಸ್.ಗಂಗಣ್ಣ, ಜಲ್ಲಿ ಹನುಮಂತಪ್ಪ, ಮಲ್ಲಿಕಾರ್ಜುನ, ತಿಪ್ಪೆಸ್ವಾಮಿ ಸೇರಿ ಮತ್ತಿತರರು ಇದ್ದರು.