ಹೊಸಪೇಟೆ: ಭ್ರಷ್ಟ ವ್ಯವಸ್ಥೆಯನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಚಲಿಸು ಕರ್ನಾಟಕ ಎಂಬ ಘೋಷ ವಾಕ್ಯದೊಂದಿಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯವು ಕೊರೊನಾದಿಂದ ನಲುಗಿ ಹೋಗಿದೆ. ಅಲ್ಲದೆ ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಿಂದ ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ಭ್ರಷ್ಟ ವ್ಯವಸ್ಥೆಯಿಂದ ನಾಡಿನ ಮತ್ತು ಜನರ ಸಂಪತ್ತು ಲೂಟಿಯಾಗುತ್ತಿದೆ. ಕೊರೊನಾ ಸೋಂಕು ನಮ್ಮಲ್ಲಿನ ಅವ್ಯವಸ್ಥೆ ಮತ್ತು ಅಕ್ರಮಗಳನ್ನು ಹೊರ ಹಾಕಿದೆ. ಅದರಲ್ಲೂ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಗಳು ಯಾವ ಮಟ್ಟದಲ್ಲಿ ಅಧೋಗತಿಗೆ ತಲುಪಿದೆ ಎಂದು ತೋರಿಸಿದೆ. ಹಾಗಾಗಿ ಇದರ ಹೋರಾಟದ ಭಾಗವಾಗಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಚಲಿಸು ಕರ್ನಾಟಕ ಎಂಬ ಘೋಷ ವಾಕ್ಯದಲ್ಲಿ ಸುಮಾರು 2,700 ಕಿ.ಮೀ ಸೈಕಲ್ ಯಾತ್ರೆಯನ್ನು ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದ 15 ದಿನಗಳ ಯಾತ್ರೆಯು ಸೆಪ್ಟೆಂಬರ್ 14, 2020 ರಂದು ಕೋಲಾರದಿಂದ ಆರಂಭವಾಗಲಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಸೆಪ್ಟೆಂಬರ್ 28 ರಂದು ಸಮಾರೋಪಗೊಳ್ಳಲಿದೆ. ಎರಡನೇ ಹಂತದ ಯಾತ್ರೆ ಅಕ್ಟೋಬರ್ 5 ರಿಂದ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಪ್ರಾರಂಭವಾಗಲಿದೆ. ನವೆಂಬರ್ ತಿಂಗಳ 23 ರಿಂದ ಮೂರನೇ ಹಂತದ ಯಾತ್ರೆಯು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನಿಂದ ಆರಂಭವಾಗಲಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮುಖಂಡರಾದ ಅಂಜಿನಿ, ದಲ್ಲಾಳಿ ಹುಸೇನ್ ಮೌಲಾ ಇನ್ನಿತರರಿದ್ದರು.