ಬಳ್ಳಾರಿ: ಇಷ್ಟೊಂದು ದೊಡ್ಡದಾದ ಆಸ್ಪತ್ರೆಗೆ ಜನರೇಟರ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಹೀಗಾಗಿ, ಈ ಆಸ್ಪತ್ರೆಗೆ ದಾಖಲಾಗುವ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶದ ಗಡಿಯಂಚಿನ ಗ್ರಾಮಗಳ ರೋಗಿಗಳಿಗೆ ಆ ಕತ್ತಲ ರಾತ್ರಿ ಕಳೆಯೋದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೌದು, ಇದು ಅಕ್ಷರಶಃ ಕಟುಸತ್ಯ. ಇಂತಹ ದೊಡ್ಡ ಆಸ್ಪತ್ರೆಗೆ ಕರೆಂಟ್ ಕಟ್ ಆದಾಗ ಜನರೇಟರ್ ವ್ಯವಸ್ಥೆ ಇಲ್ಲಾಂದ್ರೆ ಯಾರಾದ್ರೂ ನಗುತ್ತಾರೆ ಎಂಬ ತಮಾಷೆ ತಾವೆಲ್ಲ ಮಾಡಬಹುದು. ಆದರೆ, ಈ ವಿಡಿಯೋ ಮಾತ್ರ ಕಗ್ಗತ್ತಲಿನ ಕಾರ್ಮೋಡವನ್ನು ನೋಡುಗರ ಕಣ್ ಕುಕ್ಕುವಂತಿದೆ ಎಂಬುದು ಮಾತ್ರ ದಿಟ.
ಕಗ್ಗತ್ತಲಲ್ಲೇ ತುರ್ತು ಚಿಕಿತ್ಸೆ:
ಅಪಘಾತ ಸೇರಿದಂತೆ ಇನ್ನಿತರೆ ತುರ್ತು ಚಿಕಿತ್ಸೆ ನಡೆಸುವಾಗ ಇದ್ದಕಿದ್ದಂತೆಯೇ ಕರೆಂಟ್ ಕಟ್ ಆಗುತ್ತೆ. ಆದ್ರೆ ವೈದ್ಯರು ಕಂಗಾಲಾಗದೇ ಇದೆಲ್ಲ ಮಾಮೂಲಿ ಅಂತಾ ಭಾವಿಸಿ, ಮೊಬೈಲ್ಗಳ ಲೈಟ್ನ ಸಹಾಯದೊಂದಿಗೆ ತುರ್ತು ಚಿಕಿತ್ಸೆ ನಡೆಸಿರೋದು ರೋಗಿಗಳ ವಿರೋಧಕ್ಕೆ ಕೆಲಕಾಲ ಕಾರಣವಾಯಿತು.
ಕರ್ನಾಟಕ, ಆಂಧ್ರ ಪ್ರದೇಶದ ಜಿಲ್ಲೆಗಳ ಸಾವಿರಾರು ರೋಗಿಗಳ ಆಶ್ರಯದಾತ ವಿಮ್ಸ್ ಆಸ್ಪತ್ರೆಯಲ್ಲಿ ಕರೆಂಟ್ ಕಟ್ ಆದಾಗ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜನರೇಟರ್ ಅಥವಾ ಯುಪಿಎಸ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಆದರೆ, ವಿಮ್ಸ್ ಆಸ್ಪತ್ರೆ ವೈದ್ಯರು ಜನರೇಟರ್ ವ್ಯವಸ್ಥೆಯನ್ನು ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಇತ್ತಕಡೆ ಗಮನಹರಿಸಿ, ವಿಮ್ಸ್ನಲ್ಲಾಗುತ್ತಿರುವ ಬೆಳವಣಿಗೆ ಕುರಿತು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆಯ ರೋಗಿಗಳು ಹಾಗೂ ಅವರ ಸಂಬಂಧಿಕರು ಒತ್ತಾಯಿಸಿದ್ದಾರೆ.