ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದಿಂದ ಎರಡನೇ ವರ್ಷದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ನೂರಾರು ವಿದ್ಯಾರ್ಥಿಗಳ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.
ನಗರದ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದಿಂದ ಎರಡನೇ ವರ್ಷದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವೀರಶೈವ ಕಾಲೇಜಿನ ವಿದ್ಯಾರ್ಥಿಯಾಗಿ ಓದಿದ ನನಗೆ ರಾಜಕೀಯವಾಗಿ ಅಭಿವೃದ್ಧಿ ಕೆಲಸಗಳಿಗೆ ಕೋಳೂರು ಬಸವಗೌಡ ಮತ್ತು ಇಂದುಶೇಖರ ಮಾರ್ಗದರ್ಶನ ನೀಡಿದ್ದು, ಅವರೇ ನನ್ನ ರಾಜಕೀಯ ಅಭಿವೃದ್ಧಿಗೆ ಮೂಲ ಕಾರಣ ಎಂದರು.
ಬಳ್ಳಾರಿ ಭಾಗದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಇರದಿದ್ರೆ ಈ ಭಾಗದಲ್ಲಿ ಶಿಕ್ಷಣ ಅಭಿವೃದ್ಧಿ ಆಗುತ್ತಿರಲಿಲ್ಲ. ವಿವಿಧ ವಿಭಾಗಗಳನ್ನು ತೆರೆದು ತಾಲೂಕು, ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯೆ ಕೊಟ್ಟ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ ಎಂದರು.
ಹಂಪಿ ಉತ್ಸವ ಮರುಕಳಿಸಿದ ಸಾಂಸ್ಕೃತಿಕ ಉತ್ಸವ: ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಭರತನಾಟ್ಯ, ಜಾನಪದ ನೃತ್ಯ, ಡೊಳ್ಳು ಕುಣಿತ, ಬಯಲು ನಾಟಕ ಮತ್ತು ಇನ್ನಿತರ ಕಲೆಗಳನ್ನು ಒಂದೇ ವೇದಿಕೆಯ ಮೇಲೆ ಪ್ರದರ್ಶನ ಮಾಡಿದರು. ನೂರಾರು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಪ್ರೇಕ್ಷಕರು ಮನಸೋತರು.
ಈ ವೇದಿಕೆಯ ಕಾರ್ಯಕ್ರಮದಲ್ಲಿ ವಾಮದೇವ ಶೀವಾಚಾರ್ಯ ಮಹಾಸ್ವಾಮಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್, ಚೋರನೂರು ಟಿ.ಕೊಟ್ರಪ್ಪ, ಕೆ.ವೀರೇಶ್ ಗೌಡ, ಕೋಳೂರು ಮಲ್ಲಿಕಾರ್ಜುನ ಗೌಡ, ಶಶಿಕಲಾ ಅಂಗಡಿ, ಗೋನಾಳ್ ರಾಜಶೇಖರ ಗೌಡ ಮತ್ತು ಕಾರ್ಯಕ್ರಮ ನೋಡಲು ಸಾವಿರಾರು ಪ್ರೇಕ್ಷಕರು ಹಾಜರಿದ್ದರು.