ಬಳ್ಳಾರಿ: ಬಳ್ಳಾರಿಯ ಪ್ರತಿಷ್ಠಿತ ಅಲ್ಲಂ ಸುಮಂಗಲಮ್ಮ ಮಹಿಳಾ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ. ಕಾಲೇಜಿನ ಪ್ರಾಂಶುಪಾಲ ಶರಣಪ್ಪ ತನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಅತಿಥಿ ಉಪನ್ಯಾಸಕಿ ಆರೋಪ ಮಾಡಿದ್ದಾರೆ. ಉಪನ್ಯಾಸಕಿಗೆ ಅಶ್ಲೀಲ, ಲೈಂಗಿಕ ಕ್ರಿಯೆಗೆ ಒತ್ತಾಯ, ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಪ್ರಾಂಶುಪಾಲರ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಎಎಸ್‌ಎಂ ಕಾಲೇಜಿನ ಪ್ರಾಚಾರ್ಯ ಶರಣಪ್ಪ (59) ಅವರು ತಮಗೆ ಕಳೆದ ಹಲವು ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದರು ಎಂದು ಪ್ರಾಂಶುಪಾಲರ ವಿರುದ್ಧ ವೀರಶೈವ ಸಂಘದ ಮುಖ್ಯಸ್ಥರಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಉಪನ್ಯಾಸಕಿಯು ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಉಪನ್ಯಾಸಕಿಯಾದ ನಮಗೆ ಹೀಗಾದ್ರೇ ವಿದ್ಯಾರ್ಥಿನಿಯರ ಪರಿಸ್ಥಿತಿ ಏನು ಎಂದು ಸಂತ್ರಸ್ತೆ ಪ್ರಶ್ನಿಸಿದ್ದಾರೆ.
ಉಪನ್ಯಾಸಕಿ ನೀಡಿದ ದೂರಿನಲ್ಲೇನಿದೆ?: ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ''ಕಳೆದ ಮಾರ್ಚ್ 31ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಾಲೇಜಿನ ಭೌತಶಾಸ್ತ್ರ ಲ್ಯಾಬ್‌ಗೆ ಕರೆದುಕೊಂಡು ಹೋಗಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಪನ್ಯಾಸಕಿ ಉಲ್ಲೇಖಿಸಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರತಿ ಕಾರ್ಯಕ್ರಮದಲ್ಲೂ ತಮ್ಮನ್ನು ಹುಡುಕಿಕೊಂಡು ಪ್ರಿನ್ಸಿಪಾಲ್ ಬರುತ್ತಿದ್ದರು. ಕಾಮದ ದೃಷ್ಟಿಯಿಂದ ನೋಡುತ್ತಿದ್ದರು. ಸಹಕರಿಸದಿದ್ದರೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಇದರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ'' ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
''ಲೈಂಗಿಕ ಕಿರುಕುಳ ಕೊಡುವುದಲ್ಲದೆ, ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆಸಿ, ನಿನ್ನ ಪ್ರಾಣ ತೆಗೆಯುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರೂ ಪ್ರಾಂಶುಪಾಲರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಅತಿಥಿ ಉಪನ್ಯಾಸಕಿ ಆರೋಪ ಮಾಡಿದ್ದಾರೆ.
ಪ್ರಾಚಾರ್ಯರ ಮಾತಿಗೆ ಮನನೊಂದು ಕೆಲವೊಂದು ದಿನ ಕಾಲೇಜಿಗೆ ಹೋಗದೆ ರಜೆ ಹಾಕುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಈ ಬಗ್ಗೆ ಮಹಿಳಾ ಠಾಣೆ ಪೊಲೀಸರು ಸಂತ್ರಸ್ತೆ ದೂರಿನ ಮೇರೆಗೆ ಐಪಿಸಿ 354 (ಎ), 504, 506, 509 ಸೆಕ್ಷನ್ಸ್ ಅಡಿ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
''ನನ್ನ ಗಮನಕ್ಕೆ ಸಂತ್ರಸ್ತೆ ಈ ವಿಷಯ ತಂದಿರಲಿಲ್ಲ. ಲೈಂಗಿಕ ದೌರ್ಜನ್ಯದ ಕುರಿತು ಪತ್ರ ಬರೆದು ಮೂರು ದಿನಗಳ ಹಿಂದೆಯಷ್ಟೇ ಕಾಲೇಜಿನ ಕಚೇರಿಗೆ ಉಪನ್ಯಾಸಕಿ ನೀಡಿದ್ದಾರೆ. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‌ಎಂ ಕಾಲೇಜಿನ ಅಧ್ಯಕ್ಷೆ ಗಿರಿಜಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನೈತಿಕ ಪೊಲೀಸ್ಗಿರಿ ಪ್ರಕರಣ: ಹಲ್ಲೆಗೊಳಗಾಗಿದ್ದ ಯುವಕನ ಸಹೋದರನಿಂದ ಪೊಲೀಸ್ ಕಮಿಷನರ್ಗೆ ದೂರು