ಹೊಸಪೇಟೆ : ಸಮಾಜದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಕಿಡಿಗೇಡಿಗಳು ನನ್ನ ಹೆಸರಿನ ಲೆಟರ್ ಪ್ಯಾಡ್ನಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರ ವಿಳಾಸವನ್ನು ಬರೆದು ಕಳಿಸಿದ್ದಾರೆ. ಇದನ್ನು ಬರೆದವರಿಗೆ ದೇವರು ಕ್ಷಮಿಸಲ್ಲ. ನಾನು ಪ್ರಜಾ ಪ್ರಭುತ್ವದ ಮೇಲೆ ನಂಬಿಕೆಯನ್ನಿಟ್ಟಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಶಾಸಕ ಆನಂದ ಸಿಂಗ್ ಹೇಳಿದ್ದಾರೆ.
ನಗರದ ತಾಲೂಕು ಮೈದಾನದಲ್ಲಿ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಗರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವೀಕ್ಷಣೆ ಮಾಡಿ ಮಾತನಾಡಿದ ಅವರು, ಯಾರೋ ಕಿಡಿಗೆಡಿಗಳು ನನ್ನ ಲೆಟರ್ ಪ್ಯಾಡ್ ಮೇಲೆ ಶಾಸಕ ಗಾಲಿ ಜನಾರ್ಧನ ರೆಡ್ಡಿಯ ಅವರ ವಿಳಾಸವನ್ನು ಹಾಕಿದ್ದು, ರಾಜ್ಯದ ದಾವಣಗೆರೆ ಮತ್ತು ಭಟ್ಕಳದಲ್ಲಿ ಈ ನಕಲಿ ಪ್ರಮಾಣ ಪತ್ರ ಹರಿದಾಡುತ್ತಿದೆ ಎಂದರು.
ನಂತರ ಮಾತನಾಡಿದ ಅವರು, ನಾನು ಅದನ್ನು ಓದಿಲ್ಲ, ಕೇಳಿ ತಿಳಿದುಕೊಂಡಿದ್ದೇನೆ. ಅಷ್ಟೊಂದು ಕೆಟ್ಟ ಶಬ್ದಗಳಿಂದ ಬರೆದಿದ್ದಾರೆ. ಈ ಹಿಂದೆ 2018 ನೇ ವಿಧಾನಸೌಧ ಚುನಾವಣೆಯಲ್ಲಿಯೂ ಹೀಗೆ ಬರೆದಿದ್ರು. ಅದೇ ಮಾದರಿಯಲ್ಲಿ ಮತ್ತೊಮ್ಮೆ ನಕಲಿ ಪ್ರಮಾಣ ಪತ್ರವನ್ನು ಬರೆದಿದ್ದಾರೆ. ಇವರನ್ನು ದೇವರು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿಗಳು ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕಿದೆ. ಯಾರು ಏನು ಎಂಬುವುದನ್ನು ತನಿಖೆ ಮಾಡಬೇಕು. ಈಗಾಗಲೇ ರಾಯಚೂರಿನ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ತನಿಖೆ ನಡೆದ ಮೇಲೆ ಸ್ಪಷ್ಟತೆ ಸಿಗುತ್ತದೆ ಎಂದರು.
ನಾನು ಯಾರ ಹತ್ತಿರ ದ್ವೇಷದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಮುಸ್ಲಿಂ ಸಮುದಾಯದವರು ಇಂತಹ ವದಂತಿಯ ವಿಷಯಗಳನ್ನು ಕೇಳಬಾರದು ಎಂದರು. ಈ ವಿಷಯದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರನ್ನು ನೀಡಿದ್ದೇನೆ. ವಿಜಯನಗರ ಜಿಲ್ಲೆಯ ಕುರಿತು ಎಲ್ಲಾ ಸಿದ್ದತೆಗಳಾಗಿವೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದರೆ ಆಯ್ತು ಜಿಲ್ಲೆ ಹಾಗೂ ಸಚಿವ ಸ್ಥಾನ ಸಿಗುತ್ತದೆ ಎಂದರು.