ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದ್ದು, ಈ ಹಿನ್ನೆಲೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸೇವೆ ಇದೀಗ ಯಥಾಸ್ಥಿತಿಗೆ ಮರಳಿದೆ. ಈ ಹಿಂದೆ ಇದ್ದ ಎಲ್ಲಾ ಆರೋಗ್ಯ ಸೇವೆಗಳೂ ಲಭ್ಯವಾಗಲಿದ್ದು, ಅದರೊಂದಿಗೆ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ಐಸೊಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.
ಪ್ರತಿದಿನ ಸಾವಿರದ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ 30 ರಿಂದ 40 ರವರೆಗೆ ಬಂದು ನಿಂತಿದೆ. ಈ ಹಿಂದೆ ದಿನಾಲೂ 2,500 ರಿಂದ 3,000 ದವರೆಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಇದೀಗ ಕೂಡ ಅಷ್ಟೇ ಪ್ರಮಾಣದ ಟೆಸ್ಟಿಂಗ್ ಮಾಡಲಾಗುತ್ತೆ. ಆದರೆ ಸೋಂಕಿತರು ಕಡಿಮೆಯಾಗಿದ್ದಾರೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ಎಲ್. ಜನಾರ್ದನ ಮಾತನಾಡಿ, ಕೊರೊನಾ ನಿಯಂತ್ರಣದ ಸಲುವಾಗಿ ಅಂದಾಜು 16 ಕೋಟಿಯಷ್ಟು ಅನುದಾನವನ್ನ ಜಿಲ್ಲಾಡಳಿತ ವ್ಯಯಿಸಲಾಗಿದೆ. ಹಾಗೂ ಡೆಂಗ್ಯೂ, ಕಾಲರಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿತರ ಪ್ರಮಾಣ ತಗ್ಗಿರುವುದರಿಂದ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಕೋವಿಡ್ ಕೇರ್ ಸೆಂಟರ್ಗಳನ್ನು ತೆರವುಗೊಳಿಸಲಾಗಿದೆ.