ಬಳ್ಳಾರಿ: ಇಲ್ಲಿನ ಆರೋಗ್ಯ ಸಿಬ್ಬಂದಿ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡ್ತಿದ್ದಾರೆ. ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ನಿರ್ಲಕ್ಷ್ಯ ವಹಿಸಿರುವ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಂದು ಎಡವಟ್ಟನ್ನು ಸಿಬ್ಬಂದಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಜಿಲ್ಲೆಯಲ್ಲಿ ಅಮಾನವೀಯ ರೀತಿಯ ಶವಸಂಸ್ಕಾರದ ವಿಡಿಯೋವೊಂದು ವೈರಲ್ ಆಗಿತ್ತು. ಹೊಸಪೇಟೆ ಆಸ್ಪತ್ರೆಯಲ್ಲಿ ಮೃತದೇಹ ಮಳೆಗೆ ಬಿಟ್ಟಿದ್ದು, ಸೈಕಲ್ನಲ್ಲಿ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದಕ್ಕೆ ರಾಜ್ಯವ್ಯಾಪಿ ಖಂಡನೆಯಾಗಿ ಜಿಲ್ಲಾಡಳಿತ ಕ್ಷಮೆ ಕೇಳಿತ್ತು. ಇವೆಲ್ಲವುಗಳ ಮಧ್ಯೆ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ.
ಆರೋಗ್ಯ ಇಲಾಖೆ ಕೊರೊನಾ ಪಾಸಿಟವ್ ಬಂದ ವ್ಯಕ್ತಿಯ ಜೊತೆ ಆತನ ಪತ್ನಿ ಮತ್ತು ಮಗುವನ್ನು ಸಹ ಕರೆದೊಯ್ದಿರುವುದು ಚರ್ಚೆಗೆ ಗ್ರಾಸವಾಗಿದೆ. ಕನಿಷ್ಠ ಮಾಸ್ಕ್ ಮತ್ತು ಸುರಕ್ಷಾ ಕವಚ ಇಲ್ಲದೇ ಮಗುವನ್ನ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕುಡತಿನಿಯ 36 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವ್ಯಕ್ತಿ ಜಿಂದಾಲ್ ಉದ್ಯೋಗಿ ಸಹ ಆಗಿದ್ದಾರೆ. ಜಿಂದಾಲ್ ಕಳೆದ ಎರಡು ವಾರಗಳಿಂದ ನಿರ್ಬಂಧಿತ ವಲಯ ಆಗಿದೆ. ಆದರೂ ವ್ಯಕ್ತಿ ಬಂದಿದ್ದು ಹೇಗೆ. ನಿರ್ಬಂಧಿತ ವಲಯ ಆದೇಶ ಕೇವಲ ಕಣ್ಣೊರೆಸುವ ತಂತ್ರವಾ? ಎಂಬ ಅನುಮಾನ ವ್ಯಕ್ತವಾಗಿವೆ. ವಿಡಿಯೋದಲ್ಲಿ ಸೋಂಕಿತನ ಮಗು ಮತ್ತು ಪತ್ನಿಯನ್ನು ಕರೆದುಕೊಂಡು ಹೋಗುತ್ತಿರೋದ್ಯಾಕೆ ಅಂತಾ ಆರೋಗ್ಯ ಇಲಾಖೆ ಇನ್ನೂ ಸ್ಪಷ್ಟನೆ ನೀಡಿಲ್ಲ.
ಏನೇ ಕ್ವಾರಂಟೈನ್ ಅಂದ್ರು ಮಗುವನ್ನು ಪ್ರತ್ಯೇಕವಾಗಿ ಕರೆದೊಯ್ಯಬೇಕಿತ್ತು. ಆದ್ರೆ ಇಲಾಖೆ ಈ ಎಡವಟ್ಟು ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.