ಬಳ್ಳಾರಿ: ಜಿಲ್ಲಾದ್ಯಂತ ಅಕ್ರಮ ತಂಬಾಕು ಮಾರಾಟದ ಕುರಿತು ಸಾಕಷ್ಟು ದೂರುಗಳಿವೆ. ಶೀಘ್ರವೇ ಗೂಡಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಮಾರಾಟ ನಿಷೇಧವಿದ್ದರೂ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲಿ ಮಾರಾಟ ಆಗುತ್ತಿದೆ, ಅದನ್ನ ಪೂರೈಕೆ ಮಾಡೋರು ಯಾರೆಂಬುದನ್ನ ನಾವು ಈಗಾಗಲೇ ಪತ್ತೆ ಹಚ್ಚಿದ್ದು, ಶೀಘ್ರವೇ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟದ ಜಾಲಗಳನ್ನೂ ಕೂಡ ಪತ್ತೆ ಹಚ್ಚಲಾಗಿದೆ. ಅಲ್ಲಿಯೂ ಕೂಡ ಈಗಾಗಲೇ ಒಂದು ಸುತ್ತಿನ ಕಾರ್ಯಾಚರಣೆ ನಡೆಸಿ, ಎಚ್ಚರಿಕೆ ನೀಡಲಾಗಿದೆ. ಇದೀಗ ಮತ್ತೊಮ್ಮೆ ದಾಳಿ ನಡೆಸಿ ಕಳ್ಳಭಟ್ಟಿ ಸಾರಾಯಿಯನ್ನ ಜಪ್ತಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಲಾಕ್ಡೌನ್ ಸಡಿಲಿಕೆ ಪೂರ್ಣ ಪ್ರಮಾಣದಲ್ಲಿಲ್ಲ. ಕೆಲವೊಂದಿಷ್ಟು ವಿನಾಯಿತಿ ನೀಡಿ ಸಡಿಲಿಕೆ ಮಾಡಲಾಗಿದೆಯಷ್ಟೇ. ಅಂತಾರಾಜ್ಯ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಮುಂದುವರೆಯಲಿದೆ. ಅಲ್ಲದೆ ಕಂಟೈನ್ಮೆಂಟ್ ಏರಿಯಾಗಳಲ್ಲೂ ಮೇ 3ರವರೆಗೆ ಲಾಕ್ಡೌನ್ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.