ಬಳ್ಳಾರಿ: ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತ ವತಿಯಿಂದ ಇಂದು ವಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಶಿಕ್ಷಕರ ಭವನದಲ್ಲಿ ಐಎಎಸ್, ಐಪಿಎಸ್ ಮತ್ತು ಬ್ಯಾಂಕಿಂಗ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸಸಿಗೆ ನೀರುಣಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಇದೇ ವೇಳೆ ಎಸ್ಪಿ ಸೈದುಲು ಅಡಾವತ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ವಿಮ್ಸ್ ನಿರ್ದೇಶಕ ಡಾ. ದೇವಾನಂದ, ಐಎಎಸ್ ಪ್ರೊಬೇಷನರ್ ರಾಹುಲ್ ಸಂಕನೂರ, ಬಳ್ಳಾರಿ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಲಕ್ಷ್ಮೀ ಕಿರಣಿ ಇದ್ದರು.
ಇದೇ ವೇಳೆ ಮಾತನಾಡಿದ ಇನ್ ಸೈಟ್ಸ್ ಆನ್ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ವಿನಯ್, ಬಳ್ಳಾರಿ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರವಾಗಿ ಹೊರಹೊಮ್ಮಬೇಕು. ಅಂತಹ ಗುರಿಯನ್ನು ನಾವೆಲ್ಲರೂ ಇಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿಯಾಗಬೇಕಾದರೆ ವಿದ್ಯಾರ್ಥಿಗಳು ಗಂಭೀರತೆ ಹಾಗೂ ವಿಶೇಷ ಆಸಕ್ತಿ ಹೊಂದಿರಬೇಕು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಮಂತ್, ಪ್ರದೀಪ ಅವರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸೋದರ ಬಗ್ಗೆ ಹಾಗೂ ಬ್ಯಾಂಕಿಂಗ್ ಪರೀಕ್ಷೆ ಕುರಿತು ತಿಳಿಸಿಕೊಟ್ಟರು.