ಬಳ್ಳಾರಿ : ತಾಲೂಕಿನ ಶಿಡಿಗಿನಮೊಳೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ಗಲಾಟೆ ನಡೆದು ಇಬ್ಬರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ಕಾರೆಕಲ್ಲು ವೀರಾಪುರ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಚುನಾವಣೆ ಬಳಿಕ ಸೋತ ಅಭ್ಯರ್ಥಿಯ ಪತಿ ರವಿ ಮತ್ತು ಅವರ ಸಹೋದರನನ್ನು ಗೆದ್ದ ಅಭ್ಯರ್ಥಿಯ ಬೆಂಬಲಿಗರು ಹೀಯಾಳಿಸಿದ್ದರು. ಅಲ್ಲದೆ, ರವಿಯ ತಾಯಿ ವಾಸವಿರುವ ಮನೆಗೆ ತೆರಳಿ ಕಲ್ಲೆಸೆದು ಗಲಾಟೆ ಮಾಡಿದ್ದರು. ಇದರಿಂದ ಕುಪಿತಗೊಂಡ ರವಿ, ನಮಗೂ ಸಮಯ ಬರುತ್ತೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದಿದ್ದರು ಎನ್ನಲಾಗಿದೆ.
ಓದಿ : ವಿವಾಹ ವಾರ್ಷಿಕೋತ್ಸವ ದಿನದಂದೇ ಮಕ್ಕಳಿಗೆ ವಿಷವುಣಿಸಿ ದಂಪತಿ ಆತ್ಮಹತ್ಯೆ!
ಈ ವಿಚಾರದಲ್ಲಿ ಎರಡು ಕಡೆಯವರಿಗೆ ಪರಸ್ಪರ ವೈಷಮ್ಯ ಬೆಳೆದಿತ್ತು. ಜನವರಿ 5 ರಂದು ರಾತ್ರಿ ರವಿ ಮತ್ತು ಆತನ ಸಹೋದರ ಚಿರಂಜೀವಿ ವೀರಾಪುರಕ್ಕೆ ತೆರಳುವಾಗ ಇನ್ನೋವಾ ಕಾರಿನಲ್ಲಿ ಬಂದ ತಂಡ ಹಗರಿ ಸೇತುವೆ ಬಳಿ ಅಡ್ಡಗಟ್ಟಿದ್ದು, ಈ ವೇಳೆ ಕಾರು ಅಪಘಾತಗೊಂಡಿದೆ ಎನ್ನಲಾಗಿದೆ. ಕಾರು ಅಪಘಾತಗೊಂಡ ಬಳಿಕ ರವಿ ಮತ್ತು ಆತನ ಸಹೋದರನ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪಿ.ಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.