ವಿಜಯನಗರ : ಕೇಂದ್ರ ಬರ ಅಧ್ಯಯನ ತಂಡವು ಇಂದು ವಿಜಯನಗರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿತು. ಈ ವೇಳೆ ಬರ ಪರಿಶೀಲಿಸಿದ ಹಿಂದಿನ ಜಿಲ್ಲೆಗಳಿಗಿಂತ ಈ ಭಾಗದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಬರಪೀಡಿತ ಎಂದು ಘೋಷಿಸಲಾದ ಎಲ್ಲಾ ತಾಲ್ಲೂಕುಗಳ ಅಧ್ಯಯನಕ್ಕೆ ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜೇಶ್ವರ ರಾವ್, ಪಶುಸಂಗೋಪನೆ ಇಲಾಖೆ ನಿರ್ದೇಶಕ ವಿಜಯ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾವ್ ಹಾಗೂ ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರ ನೇತೃತ್ವದ ತಂಡ ಭಾನುವಾರ ಹೊಸಪೇಟೆಯ ನಂದಿಬಂಡಿ ಗ್ರಾಮಕ್ಕೆ ಮೊದಲು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ನಂದಿಬಂಡಿ ಗ್ರಾಮದ ಹರಿಜನ ಮರಿಯವ್ವ ಅವರು 3.78 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದಾರೆ. ತಂಡದ ಅಧಿಕಾರಿಗಳು ಬೆಳೆ ನಷ್ಟ ಹೊಂದಿದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಸುತ್ತಮುತ್ತಲಿನ ಭಾಗದಲ್ಲಿ ಇತರ ರೈತರು ಬಿತ್ತಿ ನಷ್ಟ ಅನುಭವಿಸಿದ್ದ ಬೆಳೆಗಳನ್ನು ಸಹ ಅಧಿಕಾರಿಗಳ ತಂಡಕ್ಕೆ ತೋರಿಸಲಾಯಿತು. ಈ ಭಾಗದಲ್ಲಿ ಉಂಟಾದ ಮಳೆ ಪ್ರಮಾಣ, ನಷ್ಟದ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಕೇಂದ್ರ ತಂಡದ ಅಧಿಕಾರಿಗಳು, ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತದೆ. ಪೂರ್ವದಲ್ಲಿ ಭೇಟಿ ನೀಡಿದ 2 ಜಿಲ್ಲೆಗಿಂತಲೂ ಹೆಚ್ಚಿನ ಹಾನಿ ಈ ಭಾಗದಲ್ಲಿ ಉಂಟಾಗಿದೆ. ಅಧಿಕಾರಿಗಳಿಂದ, ರೈತರಿಂದ ಪಡೆದ ಮಾಹಿತಿ ಜೊತೆಗೆ ರಾಜ್ಯ ಸರ್ಕಾರದ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಶೇ.90ರಷ್ಟು ಮೆಕ್ಕೆಜೋಳ ಹಾನಿ : ಜಿಲ್ಲಾಧಿಕಾರಿಗಳ ಮಾಹಿತಿಯಂತೆ ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ 3.03 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.69 ಲಕ್ಷ ಹೆಕ್ಟೇರ್ ಕೃಷಿ ಮತ್ತು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ.65ರಷ್ಟು ಭಾಗ ಬಿತ್ತನೆಯಾಗಿದ್ದ ಮೆಕ್ಕೆಜೋಳದಲ್ಲಿ ಶೇ.95ರಷ್ಟು ಹಾನಿಯಾಗಿದೆ. ಈ ಭಾಗ ಖುಷ್ಕಿ ಬೇಸಾಯ ಇರುವ ಕಾರಣದಿಂದ ಶೇಂಗಾ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದೆ. ತಂಡದ ಅಧಿಕಾರಿಗಳ ಜೊತೆ ಇದ್ದು, ಇಲ್ಲಿನ ಪರಿಸ್ಥಿತಿಯ ಒಟ್ಟಾರೆ ವರದಿಯನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.
ಸಂಕಷ್ಟ ತೋಡಿಕೊಂಡ ರೈತರು : ಬರದಿಂದ ನಷ್ಟವುಂಟಾದ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಅಧಿಕಾರಿಗಳ ಬಳಿ ರೈತರು ತಮ್ಮ ಅಳಲನ್ನು ತೋಡಿಕೊಂಡರು. ನಾವು ಮಳೆಯನ್ನೇ ಆಶ್ರಯಿಸಿದ್ದೇವೆ, ಜಲಾಶಯವಿದ್ದರೂ ನೀರಿನ ಕೊರತೆ ಹೆಚ್ಚಿದೆ. ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿರುವುದಾಗಿ ಎಂದು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿದರು. ನಂದಿಬಂಡಿ ನಂತರ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾರಾಯಣದೇವರ ಕೆರೆ, ಹಂಪಾಪಟ್ಟಣ, ಆನೆಕಲ್, ಮಾದೂರು, ತಿಮ್ಮಾಪುರ, ರಾಯರ ತಾಂಡ ಹಾಗೂ ಈಚಲುಬೊಮ್ಮನಹಳ್ಳಿ ಗ್ರಾಮಕ್ಕೆ ತೆರಳಿ ಅಲ್ಲಿ ಉಂಟಾದ ಬೆಳೆ ನಷ್ಟದ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಕೇಂದ್ರ ತಂಡದ ಅಧಿಕಾರಿಗಳ ಜೊತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ಬರಪರಿಶೀಲನೆ ನಡೆಸಿದ ಕೇಂದ್ರ ಅಧ್ಯಯನ ತಂಡ : ದಾವಣಗೆರೆ ಜಿಲ್ಲೆಯಲ್ಲೂ ಇಂದು ಕೇಂದ್ರ ತಂಡವು ಬರ ವೀಕ್ಷಣೆ ನಡೆಸಿತು. ಜಗಳೂರು ತಾಲೂಕಿನ ದೊಣ್ಣೆಹಳ್ಳಿಗೆ ಭೇಟಿ ನೀಡಿದ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ನೇತೃತ್ವದ ಕೇಂದ್ರ ತಂಡ ಇಲ್ಲಿನ ರೈತರ ಜಮೀನಿಗೆ ಭೇಟಿ ಬರ ಪರಿಶೀಲನೆ ನಡೆಸಿತು. ಈ ವೇಳೆ ಅಲಸಂದೆ, ರಾಗಿ, ಮೆಕ್ಕೆಜೋಳ, ಈರುಳ್ಳಿ, ನವಣೆ ಹೊಲಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ರೈತರಿಂದ ಮಾಹಿತಿ ಕಲೆ ಹಾಕಿತು. ಈ ವೇಳೆ ಜಿಲ್ಲಾಧಿಕಾರಿ ಡಾ ಎಂವಿ ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಅವರು ಬರದ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.
ಕೇಂದ್ರ ಬರ ಅಧ್ಯಯನ ತಂಡವು ಮೊದಲು ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ರೈತರಾದ ಜಯಮ್ಮ ಅವರ 4 ಎಕರೆಯಲ್ಲಿ ಬೆಳೆದಿದ್ದ ರಾಗಿ ಜಮೀನಿಗೆ ಹಾಗು ಸೋಮಶೇಖರ್ ಅವರ 1.39 ಎಕರೆಯಲ್ಲಿ ಬೆಳೆದಿರುವ ರಾಗಿ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಿಸಿದರು. ಬಳಿಕ ರೈತ ತಿಪ್ಪೇರುದ್ರಪ್ಪ ಅವರು 3 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಶಾಂತಮ್ಮನವರು ಬೆಳೆದ ನವಣೆಯನ್ನು ವೀಕ್ಷಣೆ ಮಾಡಿದರು. ಈ ವೇಳೆ ರೈತ ಮಹಿಳೆಯರು ಹಾಗು ರೈತರು ಸೂಕ್ತ ಬೆಳೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.
ದಾವಣಗೆರೆಯಲ್ಲಿ ಬೆಳೆ ಹಾನಿ : ದಾವಣಗೆರೆ ಜಿಲ್ಲೆಯಲ್ಲಿ ಶೇ.93ರಷ್ಟು ಬಿತ್ತನೆಯಾಗಿದ್ದು, ತೀವ್ರ ಬರ ಪರಿಸ್ಥಿತಿ ಕಾರಣದಿಂದಾಗಿ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ದಾವಣಗೆರೆ ಜಿಲ್ಲೆಯಲ್ಲಿ 2.27 ಲಕ್ಷ ಹೆಕ್ಟೇರ್ ಪೈಕಿ 1.57 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ವಿಮೆ ಕಂಪನಿಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು 47 ಸಾವಿರ ರೈತರಿಗೂ ಬೆಳೆ ವಿಮೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಭರವಸೆ ನೀಡಿದರು.
ಬರದ ವಾಸ್ತವ ವರದಿ ಸರ್ಕಾರಕ್ಕೆ ಸಲ್ಲಿಕೆ.. ವಿ.ಅಶೋಕ್ ಕುಮಾರ್ : ಜಿಲ್ಲೆಯ ಬರಪರಿಸ್ಥಿತಿಯ ವಾಸ್ತವ ಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ಹೇಳಿದ್ದಾರೆ. ಬೆಳೆ ಹಾನಿ ವೀಕ್ಷಣೆ ಮಾಡಿದ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಬರ ಅಧ್ಯಯನ ಕಾರ್ಯ ಕೈಗೊಳ್ಳಲಾಗಿದೆ. ಸದ್ಯ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅಧ್ಯಯನ ಮಾಡಲಾಗುತ್ತಿದೆ. ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ರೈತರೊಂದಿಗೆ ಸಂವಾದ ನಡೆಸಿ, ಮಾಹಿತಿ ಪಡೆಯಲಾಗುತ್ತಿದೆ. ಇದರ ಜೊತೆಗೆ ಜಿಲ್ಲಾಡಳಿತವು ಸಹ ಬರದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಧಾರವಾಡ: ಹಸಿರು ಬರ, ಹಾನಿ ಪರಿಶೀಲಿಸಿದ ಕೇಂದ್ರ ತಂಡ; ಮಳೆ ಕೊರತೆಯಿಂದ ಶೇ.91ರಷ್ಟು ಬೆಳೆ ನಷ್ಟ- ಡಿಸಿ