ಬಳ್ಳಾರಿ: ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ಹರಿಹಾಯ್ದಿದ್ದಾರೆ.
ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದಲ್ಲಿನ ಸಂಸದರ ನಿವಾಸದಲ್ಲಿ ಈಟಿವಿ ಭಾರತ್ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶವೇ ಮೋದಿ, ಮೋದಿ ಎನ್ನುತ್ತಿದೆಯಾದ್ರೂ, ಅವರು ಮಾಡಿದ ಸಾಧನೆ ಏನೆಂದು ಹೇಳುತ್ತಿಲ್ಲ. ದೇಶಪ್ರೇಮ ಹೆಸರಿನಡಿ ಮತದಾರರನ್ನ ಬಿಜೆಪಿ ದಿಕ್ಕು ತಪ್ಪಿಸುತ್ತಿದೆ ಎಂದು ದೂರಿದ್ದಾರೆ.
ರಕ್ಷಣಾ ಇಲಾಖೆಯ ದಾಖಲಾತಿಗಳನ್ನೇ ಮೋದಿಯವರು ರಕ್ಷಣೆ ಮಾಡಲಿಲ್ಲ. ಅದ್ಹೇಗೆ ಈ ದೇಶದ ಗಡಿಗಳನ್ನ ರಕ್ಷಣೆ ಮಾಡಿಯಾರು?. ಕೋಮುವಾದದ ಹೆಸರಿನಡಿ ವಿಷಬೀಜ ಬಿತ್ತುವ ಬಿಜೆಪಿಯನ್ನ ಈ ಬಾರಿಯ ಚುನಾವಣೆಯಲ್ಲಿ ದೇಶದ ಮತದಾರರು ತಿರಸ್ಕರಿಸಲಿದ್ದಾರೆ ಎಂದರು.
ಕಳೆದ ಆರೇಳು ತಿಂಗಳಲ್ಲಿ ಜಿಲ್ಲೆಯ ಮತದಾರರ ಸೇವಕನಾಗಿ ದುಡಿದ ತನ್ನನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕೈಹಿಡಿಯಲ್ಲಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ನನಗೆ ಅಭೂತಪೂರ್ವ ಬೆಂಬಲ ನೀಡಿದ್ದರು. ಈ ಬಾರಿಯೂ ಕೂಡ ಗೆಲ್ಲಿಸಲಿದ್ದಾರೆ ಎಂಬ ಆಶಾಭಾವನೆಯನ್ನ ವ್ಯಕ್ತಪಡಿಸಿದರು.