ಬಳ್ಳಾರಿ : ನಗರದ ಹನುಮಾನ್ ನಗರ ಪ್ರದೇಶದಲ್ಲಿ ಹೊರ ಚರಂಡಿ ಸ್ವಚ್ಛಗೊಳಿಸಲು ತೆರಳಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಹೀಗಾಗಿ ವಿರುಪಾಕ್ಷಿ ಸೇರಿದಂತೆ 7 ಜನರ ವಿರುದ್ಧ ಹಲ್ಲೆ, ಜಾತಿ ನಿಂದನೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ ದುರುಗಮ್ಮ ತಮ್ಮ ಸಂಗಡಿಗರಾದ ಆನಂದ್, ಗಂಗಣ್ಣ, ನಾರಾಯಣಮ್ಮ, ಮಾರಕ್ಕ, ಮಂಗಮ್ಮ ಅವರ ಜತೆ ನಗರದ ವಿರೂಪಾಕ್ಷಿ ಮನೆ ಮುಂದೆ ಒಳಚರಂಡಿಗೆ ಅಡ್ಡವಾಗಿಟ್ಟಿದ್ದ ಕಲ್ಲುಗಳನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಮನೆ ಮಾಲೀಕ ವಿರೂಪಾಕ್ಷಿ ಪೌರ ಕಾರ್ಮಿಕರೊಂದಿಗೆ ಜಗಳವಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ವಿರೂಪಾಕ್ಷಿ ಜೊತೆ ಇನ್ನಿತರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವುದು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಬ್ರೂಸ್‌ಪೇಟೆ ಪೊಲೀಸರಿಗೆ ದುರುಗಮ್ಮ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಘಟನೆ: ಮಂಗಳವಾರ ಮಧ್ಯಾಹ್ನ ಹಾಗೂ ರಾತ್ರಿ ಬಳ್ಳಾರಿ ನಗರದಾದ್ಯಂತ ಮಳೆ ಸುರಿದಿತ್ತು, ಸಾಕಷ್ಟು ಕಡೆಗಳಲ್ಲಿ ಮೋರಿಗೆ ನೀರು ಸರಾಗವಾಗಿ ತೆರಳದೇ ರಸ್ತೆಗಳೆಲ್ಲ ಜಲಾವೃತವಾಗಿದ್ದವು. ಅದೇ ರೀತಿ ಹನುಮಾನ್ ನಗರದ ರಸ್ತೆಯು ಕೂಡ ಜಲಾವೃತವಾಗಿತ್ತು. ವಿರೂಪಾಕ್ಷಿ ಎಂಬುವವರ ಮನೆಯ ಮುಂದಿನ ಮೋರಿಯಲ್ಲಿ ಮೋರಿಗೆ ಜಾಲರಿ ಅಳವಡಿಸಿದ್ದರು. ಅಷ್ಟೇ ಅಲ್ಲ ಮೋರಿ ಮೇಲೆ ಅಡ್ಡ ಕಲ್ಲು ಇಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಮೋರಿಯ ಮೇಲೆ ಮುಚ್ಚಲಾಗಿರುವ ಕಲ್ಲುಗಳನ್ನು ತೆರವುಗೊಳಿಸಿ ರಸ್ತೆ ಮೇಲಿರುವ ನೀರು ಮೋರಿಗೆ ಸರಾಗವಾಗಿ ಹೋಗುವಂತೆ ಕೆಲಸ ಮಾಡಲು ಪೌರ ಕಾರ್ಮಿಕರು ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಮೋರಿಯ ಮೇಲೆ ಹಾಕಲಾಗಿರುವ ಕಲ್ಲುಗಳನ್ನು ತೆರೆಯದಂತೆ ವಿರೂಪಾಕ್ಷಿ ಮತ್ತು ಆತನ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂಬುದು ಕಾರ್ಮಿಕರ ಆರೋಪವಾಗಿದೆ. ವಿರೂಪಾಕ್ಷಿ ಮತ್ತು ಇತರ ಆರು ಜನರ ವಿರುದ್ಧ 307, 354, 353 ಹಾಗೂ ಜಾತಿ ನಿಂದನೆ ಸೆಕ್ಷನ್‍ಗಳ ಅಡಿ ದೂರು ದಾಖಲಾಗಿದ್ದು, ಬುಧವಾರ ಸಂಜೆ ಬಳ್ಳಾರಿ ನಗರ ಡಿವೈಎಸ್‍ಪಿ ಅವರು ಪಂಚನಾಮೆ ಕೂಡ ಮಾಡಿದ್ದಾರೆ.
ಓದಿ: ಎಸ್ಸಿ-ಎಸ್ಟಿ ಸಹೋದ್ಯೋಗಿಗೆ ಜಾತಿ ನಿಂದನೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ