ವಿಜಯನಗರ: ಅನುಮತಿ ಪಡೆಯದೇ ಬೈಕ್ ರ್‍ಯಾಲಿ ನಡೆಸಿದ ಪರಿಣಾಮ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರ ಬೆಂಬಲಿಗರ 100ಕ್ಕೂ ಹೆಚ್ಚು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡು, ಕೇಸ್ ದಾಖಲಿಸಿದ್ದಾರೆ.
ಯಾವುದೇ ಅನುಮತಿ ಪಡೆಯದೆ ಬೈಕ್ ರ್‍ಯಾಲಿ ಆಯೋಜನೆ ಮಾಡಲಾಗಿತ್ತು. ವಿಷಯ ತಿಳಿದ ಹಡಗಲಿ ಡಿವೈಎಸ್ಪಿ ಹಾಲಮೂರ್ತಿರಾವ್ ಹಾಗೂ ಸಿಪಿಐ ಸುಧೀರ್ ಬೈಕ್ ರ್‍ಯಾಲಿ ತಡೆದು ಬೈಕ್ಗಳನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಿದ್ದಾರೆ. ಎಲ್ಲಾ ಬೈಕ್ಗಳನ್ನು ಸೀಜ್ ಮಾಡಿರುವ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರ್ ನಾಯಕ್ ಅವರ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಬಿ ಫಾರಂನೊಂದಿಗೆ ಕ್ಷೇತ್ರಕ್ಕೆ ಆಗಮಿಸುತ್ತಿದ್ದ ಪಿ.ಟಿ.ಪರಮೇಶ್ವರ್ ನಾಯ್ಕ ಅವರನ್ನು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ತಾಲ್ಲೂಕಿನ ಕೊಮಾರನಹಳ್ಳಿ ತಾಂಡಾದ ಗಡಿಯಲ್ಲಿ ಸ್ವಾಗತಿಸಿ, ಅಲ್ಲಿಂದ ಶಾಸಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡುತ್ತಾ ಬೈಕ್ ರ್‍ಯಾಲಿಯಲ್ಲಿ ಪಟ್ಟಣಕ್ಕೆ ಕರೆ ತರುತ್ತಿದ್ದರು.
ಟಿಕೆಟ್ ವಿಚಾರಕ್ಕೆ ಬ್ಯಾಟರಾಯನಪುರದಲ್ಲಿ ಬಂಡಾಯ: ಇನ್ನೊಂದೆಡೆ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತರ ಬಂಡಾಯ ಹಿನ್ನೆಲೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದೆ. ಕೊಡಿಗೇಹಳ್ಳಿ ಠಾಣೆ ಹಾಗೂ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ.ರವಿ ಹಾಗೂ ಮುನೀಂದ್ರ ಕುಮಾರ್ ಬೆಂಬಲಿಗರು ತಮ್ಮೇಶ್ ಗೌಡಗೆ ಟಿಕೆಟ್ ಕೊಟ್ಟಿರುವುದನ್ನು ವಿರೋಧಿಸಿ ಟೈಯರ್ ಸುಟ್ಟು ಪ್ರತಿಭಟನೆ ಮಾಡಿದ್ದರು. ಇತ್ತ ತಮ್ಮೇಶ್ ಗೌಡ ಪರ ಕಾರ್ಯಕರ್ತರಿಂದ ಮಹಿಳಾ ಕಾರ್ಯದರ್ಶಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪವಿದೆ. ಕಾಂತಲಕ್ಷ್ಮಿ ಎಂಬುವವರಿಗೆ ತಮ್ಮೇಶ್ ಗೌಡ ಪರ ಕಾರ್ಯಕರ್ತರಿಂದ ಬೆದರಿಕೆ ಹಾಕಿದ್ದಾರೆಂದು ದೂರು ನೀಡಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಧಾನಸಭಾ ಚುನಾವಣೆ: ಬೆಂಗಳೂರಲ್ಲಿ ದಾಖಲೆಯಿಲ್ಲದ ₹ 18 ಲಕ್ಷ ರೂ ಜಪ್ತಿ