ಬಳ್ಳಾರಿ: ಚುನಾವಣಾ ಆಯೋಗವು ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ, ಪಾರದರ್ಶಕವಾಗಿ ನಡೆಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಈ ದಿಸೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ದೃಶ್ಯಾವಳಿ, ಛಾಯಾಚಿತ್ರಗಳನ್ನು ನೇರವಾಗಿ ಅಪ್ಲೋಡ್ ಮಾಡಬಹುದಾದ ಮೊಬೈಲ್ ಅಪ್ಲಿಕೇಷನ್ ಸಿ-ವಿಜಿಲ್ ಎಂಬ ಆ್ಯಪ್ ಅನ್ನು ಈ ಬಾರಿ ಪರಿಚಯಿಸಲಾಗಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಮತದಾರರನ್ನು ಓಲೈಸಲು ವಿವಿಧ ರೀತಿಯ ಆಸೆ, ಆಮಿಷ, ಉಡುಗೊರೆ ನೀಡುವುದಲ್ಲದೆ ಹಣ ಹಂಚಿಕೆ, ಮದ್ಯ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡುವ ಸಾಧ್ಯತೆಗಳಿರುತ್ತವೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ. ಅದಕ್ಕಾಗಿ ಈ ಬಾರಿ ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ ಆ್ಯಪ್ ಅನ್ನು ಸಿದ್ದಪಡಿಸಿ, ಉಪಯೋಗಿಸಲು ಅವಕಾಶ ಕಲ್ಪಿಸಿದೆ.
ಸಿ-ವಿಜಿಲ್ ಅಪ್ಲಿಕೇಷನ್ ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಪ್ಲೇಸ್ಟೋರ್‍ನಲ್ಲಿ ಲಭ್ಯವಿದೆ. ಈ ಆ್ಯಪ್ನ್ನು ಡೌನ್‍ಲೋಡ್ ಮಾಡಿಕೊಳ್ಳಲು ಎರಡು ವಿಧದಲ್ಲಿ ಅವಕಾಶ ಇದೆ. ತಮ್ಮ ಹೆಸರು ನೊಂದಾಯಿಸದೇ ಹಾಗೂ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡುವ ಮೂಲಕ ನೋಂದಾಯಿಸಬಹುದು. ಈ ಆ್ಯಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ವಿಡಿಯೋ, ಫೋಟೋಗಳನ್ನು ನೇರವಾಗಿ ಅಪ್‍ಲೋಡ್ ಮಾಡಿದಲ್ಲಿ ಆಯಾ ಜಿಲ್ಲಾ ನಿಯಂತ್ರಣಾ ಕೇಂದ್ರಕ್ಕೆ ಬರುತ್ತದೆ. ಇದರಲ್ಲಿ ಐದು ನಿಮಿಷವುಳ್ಳ ವಿಡಿಯೋ, ಫೋಟೋ ಕಳುಹಿಸಲು ಅವಕಾಶ ಇದೆ. ಯಾವ ಸ್ಥಳದಿಂದ ಫೋಟೋ, ವಿಡಿಯೋ ಅಪ್ಲೋಡ್ ಮಾಡಲಾಗುತ್ತಿದೆ ಎಂಬುದನ್ನು ಜಿಪಿಎಸ್ ಮೂಲಕ ಸ್ಥಳದ ಮಾಹಿತಿ ಡಿ.ಸಿ.ಸಿ. ಕೇಂದ್ರದಲ್ಲಿ ಪ್ರದರ್ಶನವಾಗುತ್ತದೆ. ತಕ್ಷಣ ನಿಯಂತ್ರಣ ಕೇಂದ್ರದಲ್ಲಿನ ಸಿಬ್ಬಂದಿ ಹತ್ತಿರದ ಫ್ಲೈಯಿಂಗ್ ಸ್ಕ್ವಾಡ್‍ಗೆ ಮಾಹಿತಿಯನ್ನು ರವಾನಿಸಲಿದೆ. ಅಪ್‍ಲೋಡ್ ಮಾಡಿದ 15 ನಿಮಿಷಗಳ ಒಳಗಾಗಿ ಉಲ್ಲಂಘನೆಯ ಸ್ಥಳಕ್ಕೆ ತಂಡ ಆಗಮಿಸಲು ಸಾಧ್ಯವಾಗಲಿದೆ.
ಲೈವ್ ಫೋಟೋ ಮತ್ತು ವಿಡಿಯೋ ಮಾತ್ರ ಸಿ-ವಿಜಲ್ ಮೂಲಕ ಅಪ್‍ಲೋಡ್ ಮಾಡಲು ಅವಕಾಶ ಇದ್ದು, ಗ್ಯಾಲರಿಯಲ್ಲಿನ ಫೋಟೋ, ವಿಡಿಯೋ ಕಳುಹಿಸಲು ಆ್ಯಪ್ನಲ್ಲಿ ಅವಕಾಶವಿಲ್ಲ. ಇದು ಈ ಆ್ಯಪ್‍ನ ವಿಶೇಷವಾಗಿದೆ. ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲೆಯಾದ್ಯಂತ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ವಿಡಿಯೋ, ಫೋಟೋ ಕಳುಹಿಸಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಸಿ-ವಿಜಿಲ್ ಆ್ಯಪ್ ತೆರೆದಾಗ ಯಾವ ವಿಧಾನಸಭಾ ಕ್ಷೇತ್ರ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕಾರ, ಹಣ ಹಂಚಿಕೆ, ಮದ್ಯ ವಿತರಣೆ, ಸೇರಿದಂತೆ ಉಲ್ಲಂಘನೆಯ 15 ವಿಧದ ವಿವರ ಇರಲಿದೆ. ಫೋಟೋ ಮತ್ತು ವಿಡಿಯೋದಲ್ಲಿರುವಂತೆ ಆಯ್ಕೆ ಮಾಡಿ ಸಬ್ಮಿಟ್ ಕೊಡಬೇಕಾಗುತ್ತದೆ.
ಸುಳ್ಳು ಹಾಗೂ ತಪ್ಪು ಮಾಹಿತಿ ಅಪ್‍ಲೋಡ್ ಮಾಡುವಂತಿಲ್ಲ. ಚುನಾವಣಾ ಆಯೋಗವು ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಸಾರ್ವಜನಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಮುಂದೆ ಬರಬೇಕಿದೆ.