ಹೊಸಪೇಟೆ: ವೀರಶೈವ ಜಂಗಮರು ದಲಿತ ಅಲೆಮಾರಿ ಜನಾಂಗದ ಬೇಡ, ಬುಡ್ಗ ಜಂಗಮ ಮೀಸಲಾತಿಯನ್ನು ಕಬಳಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘ, ಕಲ್ಯಾಣ ಕರ್ನಾಟಕ ಅಲೆಮಾರಿ(ಪ.ಜಾ) ಬುಡ್ಗ ಜಂಗಮ ಜಾಗೃತಿ ಸೇವಾ ಸಂಘದ ನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ವೀರಶೈವ ಜಂಗಮರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಮನವಿ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿ 19ನೇ ಕಲಂನಲ್ಲಿ ಬೇಡ ಜಂಗಮ, ಬುಡ್ಗ ಜಂಗಮ ಬರುತ್ತವೆ. ವೀರಶೈವ ಜಂಗಮರು ನಾವೇ ಬೇಡ ಜಂಗಮ ಎಂದು ಪ್ರತಿಭಟನೆ ನಡೆಸಿ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ಆಗ್ರಹಿಸುತ್ತಿದ್ದಾರೆ. ಆದರೆ ವೀರ ಶೈವರು ಅಸ್ಪೃಶ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಜಂಗಮರು ಪಂಚ1ಪೀಠಗಳಾದ ಕಾಶಿ, ರಂಭಾಪುರಿ, ಶ್ರೀಶೈಲ, ಉಜ್ಜಿನಿ, ಕೇದಾರನಾಥ ಪರಂಪರೆಗೆ ಸೇರಿದವರು. ವೀರಶೈವ ಜಂಗಮರು ಶೋಷಿತ ಹಾಗೂ ಅಸ್ಪೃಶ್ಯ ಜಾತಿಗೆ ಬರುವುದಿಲ್ಲ. ಆದರೆ ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಿದರು.