ಬಳ್ಳಾರಿ: ಈಜಲು ಹೋದ ಬಾಲಕ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಆದ್ರೆ, ತಮ್ಮ ಮಗನನ್ನು ಉಪ್ಪು ಹಾಕಿ ಮುಚ್ಚಿ ಮಲಗಿಸಿದರೆ ಆತ ಬದುಕಿ ಬರುತ್ತಾನೆ ಎಂಬ ಮೂಢನಂಬಿಕೆಯಿಂದ ಪೋಷಕರು ನಾಲ್ಕು ತಾಸುಗಳ ಕಾಲ ಮೃತದೇಹವನ್ನು ಉಪ್ಪಿನಲ್ಲಿಯೇ ಮಲಗಿಸಿದ್ದಾರೆ.
ವಿವರ: ಸಿರವಾರ ಗ್ರಾಮದ ಸುರೇಶ್(10) ನಿನ್ನೆ ತಮ್ಮ ಸ್ನೇಹಿತರೊಂದಿಗೆ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದ. ಈಜು ಬಾರದೆ ನೀರಿನಲ್ಲಿ ಮುಳುಗಿ ಆತ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಷಕರು ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತದೇಹದ ಶಿರ ಭಾಗವನ್ನು ಬಿಟ್ಟು ಉಳಿದ ದೇಹಕ್ಕೆ ಉಪ್ಪು ಸುರಿದಿದ್ದಾರೆ. ಸುಮಾರು ನಾಲ್ಕು ತಾಸು ಕಳೆದರೂ ಆತ ಬದುಕಿ ಬರಲಿಲ್ಲ. ಇದರಿಂದ ತಮ್ಮ ಮೌಢ್ಯತೆ ಅರಿತ ಪೋಷಕರು ದೇಹವನ್ನು ಕೊನೆಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.
ನೀರಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡವರನ್ನು ಉಪ್ಪಿನಲ್ಲಿ ಈ ರೀತಿ ಮಲಗಿಸಿದರೆ ಅವರು ಮತ್ತೆ ಮರಳಿ ಬದುಕಿ ಬರುತ್ತಾರೆ ಎಂದು ಪೋಷಕರಿಗೆ ಯಾರೋ ಮಾಹಿತಿ ನೀಡಿದ್ದರಂತೆ. ಇದನ್ನು ಮಗನ ಸಾವಿನ ಸಂದರ್ಭದದಲ್ಲಿ ನೆನಪಿಸಿಕೊಂಡಿರುವ ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಜಯಪುರ: ಪತಿಯಿಂದ ಪತ್ನಿಯ ಬರ್ಬರ ಕೊಲೆ