ಬಳ್ಳಾರಿ: ಕೋವಿಡ್ ಸಂಕಷ್ಟದ ಕಾಲದಲ್ಲೂ ಜಿಲ್ಲೆಯಾದ್ಯಂತ ಸಂಕ್ರಾಂತಿ ಸಂಭ್ರಮ ಮೇಳೈಸುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚರಗ ಚೆಲ್ಲೋ ಹಬ್ಬವನ್ನ ರೈತರು ಆಚರಿಸಿದ್ರೆ, ತಾಲೂಕಿನ ಕೊಳಗಲ್ಲು ಕೃಷ್ಣಾನಗರ ಕ್ಯಾಂಪಿನಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಯುವಕ-ಯುವತಿಯರು ಹಾಗೂ ಮಹಿಳೆಯರು, ಪುರುಷರು ಸೇರಿಕೊಂಡು ಪಕ್ಕಾ ಆಂಧ್ರ ಶೈಲಿಯಲ್ಲೇ ಹಬ್ಬ ಆಚರಿಸುತ್ತಿದ್ದಾರೆ.
ಹಬ್ಬದ ನಿಮಿತ್ತ ಈ ದಿನ ಭೋಗಿಯನ್ನ ಆಚರಿಸಲಾಯಿತು. ಬೆಳ್ಳಂಬೆಳಗ್ಗೆ ಮನೆಯಂಗಳವನ್ನು ಸಗಣಿ ನೀರಿನಿಂದ ಸಾವರಿಸಿ, ಬಣ್ಣಬಣ್ಣದ ರಂಗೋಲಿ ಚಿತ್ತಾರವನ್ನ ಹಾಕಲಾಗಿತ್ತು. ಇದಕ್ಕೂ ಮುಂಚೆಯೇ ಮನೆಯೊಂದರ ಗೇಟ್ ಬಳಿ ಕಟ್ಟಿಗೆಯಿಂದ ತ್ರಿಕೋನಾಕಾರದಲ್ಲಿ ಜೋಡಿಸಿ ಸುಡಲಾಯಿತು. ಬಳಿಕ ತರುಣಿಯರು ಅದರ ಸುತ್ತಲೂ ಕುಣಿದು ಕುಪ್ಪಳಿಸಿದ್ರು.
ಹಬ್ಬದ ಸಂಭ್ರಮದ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಯುವತಿ ಶ್ರಾವಂತಿ, ದೂರದ ಊರುಗಳಿಗೆ ಶಿಕ್ಷಣ ಪಡೆಯಲು ಹೋದ್ರೂ ಕೂಡ ಈ ದಿನದಂದು ಇಲ್ಲಿಗೆ ಬಂದು ಸೇರುತ್ತೇವೆ. ಸಂಕ್ರಾಂತಿ ಹಬ್ಬವೆಂದರೆ ಬಲು ಇಷ್ಟ. ಹೀಗಾಗಿ, ಪ್ರತಿಯೊಬ್ಬರ ಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ ಬಿಡಿಸುತ್ತೇವೆ ಎಂದರು.
ಸಂಕ್ರಾಂತಿ ಹಬ್ಬವನ್ನ ಈ ಕ್ಯಾಂಪಿನಲ್ಲಿ ಮೂರು ದಿನಗಳಕಾಲ ಆಚರಿಸಲಾಗುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ ಮೇಳೈಸಲಿದೆ. ಈ ದಿನ ಭೋಗಿ, ನಾಳೆಯ ದಿನ ಸಂಕ್ರಾಂತಿ ಹಾಗೂ ಮಾರನೇ ದಿನವೂ ಕೂಡ ಈ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತೆ ಎಂದು ಸಾಯಿಕಿರಣಿ ಹೇಳಿದ್ದಾರೆ.
ಮನಸೆಳೆದ ರಂಗೋಲಿ ಚಿತ್ತಾರ: ಕ್ಯಾಂಪಿನ ಮಹಿಳೆಯೊಬ್ಬರು ಹಾಕಿದ್ದ ಬಣ್ಣಬಣ್ಣದ ರಂಗೋಲಿ ಚಿತ್ತಾರವು ನೋಡುಗರ ಕಣ್ಮನ ಸೆಳೆಯಿತು. ಅದು ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. ಅಲ್ಲದೇ ನಗರದ ರೇಡಿಯೋ ಪಾರ್ಕ್, ಸುಧಾಕ್ರಾಸ್, ಒಪಿಡಿ ಪ್ರದೇಶದ ಸುತ್ತಮುತ್ತಲು ಹಾಗೇ ವಿಜ್ಞಾನ ಶಾಲೆಯಲ್ಲಿ ಕೆಲ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕರು ಸೇರಿ ರಂಗೋಲಿ ಹಾಕಿ, ಸಂಕ್ರಾಂತಿ ಹಬ್ಬದ ಮೊದಲನೇ ದಿನದ ಬೋಗಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದ್ದಾರೆ.